ಗೋವಾದಲ್ಲಿ ಆಪರೇಷನ್ ಕಮಲ ಯಶಸ್ವಿ
ಪಣಜಿ: ಗೋವಾದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದ ರಾಜಕೀಯ ನಾಟಕಕ್ಕೆ ಕೊನೆಗೂ ತೆರೆ ಬಿದ್ದಿದೆ. 8 ಕಾಂಗ್ರೆಸ್ ಶಾಸಕರ ಗುಂಪು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ. ಇದನ್ನು ಗೋವಾ ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ಶೇಟ್ ತನವಾಡೆ ಅವರು ಔಪಚಾರಿಕವಾಗಿ ಪ್ರಕಟಿಸಿದ್ದಾರೆ. ಎಲ್ಲ ಎಂಟು ಶಾಸಕರನ್ನು ಬಿಜೆಪಿಯ ಪಕ್ಷದ ಕಚೇರಿಯಲ್ಲಿ ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಉಪಸ್ಥಿತರಿದ್ದರು. ಕಾಂಗ್ರೆಸ್ ಶಾಸಕರ ಬಿಜೆಪಿ ಪ್ರವೇಶದಿಂದ ಗೋವಾದಲ್ಲಿ ಬಿಜೆಪಿ ಬಲ ಮತ್ತಷ್ಟು ಹೆಚ್ಚಿದೆ. ದಿಗಂಬರ್ ಕಾಮತ್ ಅವರು ಮಡಗಾಂವ್ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಸತತ ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇದೀಗ ಕಾಮತ್ ಬಿಜೆಪಿಗೆ ಸೇರ್ಪಡೆಗೊಂಡಿದ್ದು, ಕಾಂಗ್ರೆಸ್ನ ಭದ್ರಕೋಟೆಯೂ ಬಿಜೆಪಿ ಹಿಡಿತಕ್ಕೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ತನವಾಡೆ ಘೋಷಿಸಿದ್ದಾರೆ. ಈ ಮೂಲಕವಾಗಿ ಗೋವಾದಲ್ಲಿ ಬಿಜೆಪಿಯ ಆಪರೇಷನ್ ಕಮಲ ಯಶಸ್ವಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ನಮ್ಮದೇ ನಾಯಕರ ಕಾಲೆಳೆಯುವ ಪ್ರಯತ್ನಗಳು ನಡೆಯುತ್ತಿವೆ. ನಾವು ಬಿಜೆಪಿ ಸೇರಲು ನಿರ್ಧರಿಸಿದ್ದೇವೆ ಎಂದು ಮೈಕಲ್ ಲೋಬೋ ವಿವರಿಸಿದ್ದಾರೆ. ಲೋಬೋ ಅವರು ಬಿಜೆಪಿಗೆ ಎಂಟ್ರಿ ಕೊಟ್ಟಿರುವುದರಿಂದ ಇಡೀ ಬಾರದೇಸ್ ತಾಲೂಕಿನಲ್ಲಿ ಸಂತಸದ ವಾತಾವರಣವಿದೆ ಎನ್ನಲಾಗುತ್ತಿದೆ.
ಬಿಜೆಪಿ ಸೇರಿದ ಕಾಂಗ್ರೆಸ್ ಶಾಸಕರ ಗುಂಪಿನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಮಡಗಾಂವ್ ಶಾಸಕ ದಿಗಂಬರ್ ಕಾಮತ್ ಸೇರಿದಂತೆ 7 ಶಾಸಕರು ಇದ್ದಾರೆ. ಇದರಲ್ಲಿ ಮುಖ್ಯವಾಗಿ ಕಾಂಗ್ರೆಸ್ ಶಾಸಕರಾದ ಮೈಕೆಲ್ ಲೋಬೋ, ದಿಲಾಯ್ಲಾ ಲೋಬೋ, ಅಲೆಕ್ಸ್ ಸಿಕ್ವೇರಾ, ಸಂಕಲ್ಪ್ ಅಮೋನ್ಕರ್, ಕೇದಾರ್ ನಾಯಕ್, ರಾಜೇಶ್ ಪಾಲ್ದೇಸಾಯಿ ಮತ್ತು ರುಡಾಲ್ಫ್ ಫೆರ್ನಾಂಡಿಸ್ ಒಳಗೊಂಡಿದ್ದಾರೆ.