ಮುಂಬೈ: ಮಹಾರಾಷ್ಟ್ರದ ಪಾಲ್ಘರ್ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿಯೊಬ್ಬರು ಜೈಪುರ-ಮುಂಬೈ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಎಎಸ್‌ಐ ಸೇರಿದಂತೆ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಜೈಪುರ ಎಕ್ಸ್‌ಪ್ರೆಸ್ ರೈಲು (129576) ರೈಲಿನಲ್ಲಿ ಆರ್‌ಪಿಎಫ್ ಯೋಧ ಬೆಳಗ್ಗೆ 5.23ಕ್ಕೆ ಗುಂಡಿನ ದಾಳಿ ನಡೆಸಿದ್ದು, ಅಸಿಸ್ಟೆಂಟ್ ಸಬ್ ಇನ್‌ಸ್ಪೆಕ್ಟರ್, ಓರ್ವ ಆರ್‌ಪಿಎಫ್ ಸಿಬ್ಬಂದಿ ಹಾಗೂ ಜೈಪುರದಿಂದ ಮುಂಬೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರಯಾಣಿಕರು ಸೇರಿ ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರೈಲ್ವೆ ರಕ್ಷಣಾ ಪಡೆಯ ಕಾನ್‌ಸ್ಟೆಬಲ್ ಚೇತನ್ ಸಿಂಗ್ ಅವರೇ ಗುಂಡಿನ ದಾಳಿ ನಡೆಸಿರುವ ಆರೋಪಿಯಾಗಿದ್ದು, ಸದ್ಯ ಅವರನ್ನು ಪೊಲೀಸರು ಬಂಧಿಸಿದ್ದಾರೆ.