ಉನ್ಮನದಲ್ಲಿದೆ ಸಾಧನೆಗೆ ದಾರಿ

ಗುರುಬೋಧೆ
Advertisement

ಇಂದಿನ ದಿನಮಾನಗಳಲ್ಲಿ ಮಾನವನು ತನ್ನ ವ್ಯಕ್ತಿತ್ವ ವಿಚಾರದಲ್ಲಿ ಕೇವಲ ಪ್ರಗತಿಯನ್ನು ಹುಡುಕ ಹೊರಟಿದ್ದಾನೆ. ಬಹಿರಂಗ ಜೀವನದ ಯಾತ್ರಿಕ ಪರಿಶೋಧನೆಯೊಂದನ್ನೇ ತನ್ನ ವಾಸ್ತವಿಕ ಶೋಧನೆಯನ್ನಾಗಿ ಭಾವಿಸಿದ್ದಾನೆ. ಇದರಿಂದ ಕ್ಷಣಿಕ ಶಾಂತಿ ಸಮಾಧಾನ.
ಈ ಬಹಿರಂಗ ಭೌತಿಕ ಪ್ರಪಂಚವನ್ನು ಮೀರಿ ಮಾನವನು ತನ್ನ ಮನಸ್ಸು ಅಂತರ್ಮುಖಿವಾಗಿ ಪರಿವರ್ತಿಸಿಕೊಂಡಲ್ಲಿ ಆತ್ಮಸಂತೃಪ್ತಿ ಲಭಿಸುವದು. ಆದರೆ ಇಂದಿನ ಇಪ್ಪತ್ತನೆ ಶತಮಾನದ ವಿಜ್ಞಾನವು ತತ್ವ ಜ್ಞಾನದತ್ತ ಗಮನವನ್ನೇ ಹರಿಸಿಲ್ಲ. ಅದಕ್ಕಾಗಿ ಮಾನವ ಮೂಲ ವ್ಯಕ್ತಿತ್ವವು ವಿಕಾಸ ಹೊಂದುತ್ತಿಲ್ಲ. ಇದರಿಂದಲೇ ಸ್ವಾರ್ಥ, ಮೋಸ, ವಂಚನೆ, ವಿಷಯಲಂಪಟತನಗಳು ಹೆಚ್ಚಾಗುತ್ತ ಸಾಗಿವೆ. ಆತ್ಮಸಂತೃಪ್ತಿ ಕನಸಿನ ಮಾತಾಗಿದ್ದು ಕ್ಷಣಿಕ ತೃಪ್ತಿಯೇ ತಾಂಡವಾಡುತ್ತಲಿದೆ. ಯಾರಿಗೂ ಸಹನೆ ಸಹಕಾರವೇ ಇಲ್ಲದಾಗಿದೆ.
ನಿಜವಾದ ಮಾನವನಾರು? ಎಂಬ ಪ್ರಶ್ನೆ ಇದಿರಾದಾಗ ಉತ್ತರಿಸುವುದು ಕಠಿಣವಾಗ ಹತ್ತಿದೆ. ಆದರೆ ಹಿಂದಿನವರ ಆದರ್ಶಗಳನ್ನು ಅಧ್ಯಾತ್ಮ ಜೀವನವನ್ನು ಸಾಂಸ್ಕೃತಿಕ ಪರಂಪರೆಯನ್ನು ಧರ್ಮ ಜಿಜ್ಞಾಸೆಯನ್ನು ಮೆಲಕು ಹಾಕಿದರೆ, ಉನ್ಮನವಾಗುವ ದಾರಿ ಸುಲಭವಾಗುವದು.
ದ್ವೇಷಾಸೂಯೆಗಳು ಮಾಯವಾಗುತ್ತವೆ. ಶಾಂತಿ ಸಮಾಧಾನಗಳು ನೆಲೆಗೊಳ್ಳುವವು. ಸತ್ಕೃತಿಯೇ ಸುಜ್ಞಾನ, ಸತ್ಪ್ರೇಮ, ಸತ್ಯ ಅಹಿಂಸೆಗಳು ಸಕಲರಲ್ಲಿ ಬೆಳೆಯುವವು ಮಾನವರೆಲ್ಲ ಒಂದೆಂಬ ಭಾವೈಕ್ಯತೆ ಒಡಮೂಡುತ್ತದೆ. ಉನ್ಮನಗೊಂಡ ಮಾನವನಿಗೆ ಸ್ಥಿತಪ್ರಜ್ಞ ಎನ್ನುವರು ಸ್ಥಿತಪ್ರಜ್ಞ ಸ್ಥಿತಿಯನ್ನು ಸಾಧಿಸುವುದೇ ಉನ್ಮನ ಸಿದ್ಧಿಯಾಗಿದೆ. ಸ್ಥಿತಪ್ರಜ್ಞನು ಮುನಿಯೆನಿಸಿಕೊಳ್ಳುವನು. ಅವನೇ ಏನೆಲ್ಲ ಸಾಧಿಸಲು ಸಮರ್ಥನಾಗುವನು. ಸತ್ಸಂಗ, ಸದಭಿಪ್ರಾಯ ಹಾಗೂ ಸದ್ವಿಚಾರಗಳುಳ್ಳ ಪುಸ್ತಕ ಓದು ಇತ್ಯಾದಿ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಅಂದಾಗಲೇ ಆ ಸಿದ್ಧಿ ಲಭಿಸುತ್ತದೆ.