ನಾಮ ಸಂಕೀರ್ತನವೇ ಸುಖದ ದಾರಿ

PRATHAPPHOTOS.COM
Advertisement

“ನಂದಂತಿ ಅನೈಃಕೀರ್ತಿಮಾನ ಅಭಿನಂದನ”
ಎಂದು ಯಾದವಾರ್ಯರು ಒಂದು ಕಡೆ ಹೇಳುತ್ತಾರೆ. ಇನ್ನೊಬ್ಬರು ದೇವರ ನಾಮ ಉಚ್ಚಾರಣೆ ಮಾಡಿದರೆ ಆನಂದ ಪಡಬೇಕು. ತಾನೂ ಮಾಡಬೇಕು ಇನ್ನೊಬ್ಬರು ಹಾಡು ಹೇಳಲಿ ನಾಮ ಸಂಕೀರ್ತನೆ ಮಾಡಲಿ ಪ್ರವಚನ ಹೇಳಲಿ ಪುರಾಣ ಮಾಡಲಿ ಒಂದು ಪುಟ್ಟ ಮಗುವೇ ಹೇಳಲಿ. ಅದರಲ್ಲಿ ದೇವರ ಮಹಿಮೆ ಇದೆ ಎಂದರೆ ಅಷ್ಟು ತನ್ಮಯತೆಯಿಂದ ಶ್ರವಣ ಮಾಡಿದರೆ ಅವನು ಭಕ್ತಿಯ ಪರಾಕಾಷ್ಟೆಯನ್ನು ತಲುಪಿದಂತೆ.
ನಂದಂತಿ' ಶಬ್ದದ ಅರ್ಥ ಏನೆಂದರೆ ಜೀವನದಲ್ಲಿ ಮನುಷ್ಯ ತಾನು ದೇವರ ಸ್ಮರಣೆ ಮಾಡುವದು ಹಾಡು ಹೇಳುವುದು ಪುರಾಣ ಹೇಳುವದು ದೊಡ್ಡದಲ್ಲ... ಅದೆಲ್ಲ ಮಾಡುವುದು ದೊಡ್ಡದೇ ಆದರೂ ಸಾಕಾಗುವುದಿಲ್ಲ. ಇನ್ನೊಬ್ಬರು ಹಾಡು ಹೇಳುತ್ತಿದ್ದರೆ ಯಾವ ಕಡೆಗೆ ನೋಡುತ್ತಾ ಅವರೇನು ಹಾಡುತ್ತಾರೆ ಎಂದು ಅಸಡ್ಡೆಯನ್ನು ತೋರಿಸುವುದು ಸರಿಯಲ್ಲ. ನಿಮಗಿಲ್ಲಿ ಯಾವ ರಾಗಬೇಕು, ಭಕ್ತಿ ಬೇಕು? ಅವರು ಯಾವುದೇ ರಾಗದಲ್ಲಿ ಹಾಡಲಿ ಭಕ್ತಿಯಿಂದ ಹಾಡಿದ್ದಾರೆ. ದೇವರದ್ದೇ ನಾಮಸ್ಮರಣೆ ಮಾಡಿದ್ದಾರೆ. ಮಹಿಮೆಯನ್ನೇ ಹೇಳಿದ್ದಾರೆ ಎಂದರೆ ಅದನ್ನು ತನ್ಮಯತೆಯಿಂದ ಕೇಳುವ ಸಹನಶೀಲತೆಯನ್ನು ಬೆಳೆಸಿಕೊಂಡು ಆ ರೀತಿ ಅ ಪರಮಾತ್ಮನಲ್ಲಿ ಭಕ್ತಿಯನ್ನು ಮಾಡಬೇಕು. ಎಲ್ಲೆಲ್ಲಿ ಭಗವಂತನ ಸಂಕೀರ್ತನೆ ನಡೆಯುತ್ತದೆಯೋ ಅದು ಪಾವನ ಕ್ಷೇತ್ರವೆನಿಸಿಕೊಳ್ಳುತ್ತದೆ. ಕಾರಣ ದೇವರ ನಾಮವೇ ಹಾಗೇ. ನಾಮದಲ್ಲಿ ಶಕ್ತಿ ಇದೆ. ಇದಕ್ಕೆನಿನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಬಲವೊಂದಿದ್ದರೆ ಸಾಕೋ’ ಎಂದು ಪುರಂದರದಾಸರು ಹಾಡಿದ್ದು, ದೇವರೊಂದಿಗೆ ಜಗಳವಲ್ಲ. ಬದಲಾಗಿ ದೇವರ ನಾಮದಲ್ಲಿನ ಶಕ್ತಿಯನ್ನು ಎತ್ತಿ ತೋರಿಸಲು. ಯಾವ ನಾಮಮಂತ್ರದಿಂದ ನಮ್ಮನ್ನು ನಾವು ಮರೆಯುತ್ತೇವೆಯೋ ಅಲ್ಲಿ ಆನಂದ ಹೊಂದುತ್ತೇವೆ. ಲೌಕಿಕವಾಗಿಯೂ ಕೆಲವೊಂದು ವಿಷಯಕ್ಕೆ ಮೈಮರೆಯುತ್ತೇವೆ. ವಾತ್ಸಲ್ಯಕ್ಕೋ ಮಮಕಾರಕ್ಕೋ ಪ್ರೀತಿಗೋ ಇತ್ಯಾದಿ.. ಇವ್ಯಾವವೂ ಶಾಶ್ವತವಾದ ಸುಖವನ್ನು ಕೊಡಲಾರವು. ನಿಮ್ಮ ವಾತ್ಸಲ್ಯ, ಪ್ರೀತಿ, ಮಮಕಾರಗಳೇ ಎರವಾಗಬಹುದು. ಕಾರಣ ಮನುಷ್ಯ ಸಂಬಂಧಗಳು ಪ್ರಾಕೃತಿಕ ಗುಣಗಳಿಂದ ಕೂಡಿದ್ದಾಗಿದ್ದರಿಂದ ಅಲೌಕಿಕ ಸುಖ ಬಯಸುವದು ತಪ್ಪು . ಹಾಗಾಗಿ ದೇವನ ನಾಮಸ್ಮರಣೆ ಮತ್ತು ತಾದ್ಯಾತ್ಮತೆಯಲ್ಲಿ ಅಲೌಕಿಕವಾದ ನೆಮ್ಮದಿ ಇದೆ. ಹಾಗೇ ನಾಮಶ್ರವಣದಲ್ಲೂ ಪುಣ್ಯಪ್ರಾಪ್ತಿ ಇದೆ.