ಗ್ರಾಮ ನ್ಯಾಯಾಲಯಕ್ಕೆ ಇಚ್ಛಾಶಕ್ತಿಯ ಕೊರತೆ

ಸಂಪಾದಕೀಯ
Advertisement

ಗ್ರಾಮ ನ್ಯಾಯಾಲಯ ಸ್ಥಾಪನೆಗೆ ಮುನ್ನ ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ವಿಡಿಯೋ ಕಾನ್ಸ್ರೆನ್ಸ್ ಈಗ ಜನಪ್ರಿಯಗೊಳ್ಳುತ್ತಿದೆ.

ಕೇಂದ್ರ ಸರ್ಕಾರ ೨೦೦೮ರಲ್ಲೇ ಗ್ರಾಮ ಮಟ್ಟದಲ್ಲಿ ಪ್ರತ್ಯೇಕ ನ್ಯಾಯಾಲಯಗಳನ್ನು ತೆರೆಯಲು ಕಾಯ್ದೆ ರೂಪಿಸಿತು.ಇದರ ಬಗ್ಗೆ ರಾಜ್ಯ ಸರ್ಕಾರಗಳು ಹೆಚ್ಚು ಆಸಕ್ತಿ ತೋರಿಸಲಿಲ್ಲ. ೯ ರಾಜ್ಯಗಳು ಇದರ ಬಗ್ಗೆ ಗಮನಹರಿಸಿದವು. ಆದರೆ ೪ ರಾಜ್ಯಗಳು ಮಾತ್ರ ನ್ಯಾಯಾಲಯವನ್ನು ಗ್ರಾಮಗಳಲ್ಲಿ ತೆರೆಯುವ ಪ್ರಯತ್ನ ಮಾಡಿದವು. ಈಗ ಕರ್ನಾಟಕ ಸರ್ಕಾರ ೧ ಸಾವಿರ ಗ್ರಾಮ ನ್ಯಾಯಾಲಯ ತೆರೆಯಲು ಆಲೋಚಿಸಿದೆ. ಇದು ಜ್ಯೂಡಿಷಿಯಲ್ ಮ್ಯಾಜಿಸ್ಟೆಟ್ ನ್ಯಾಯಾಲಯಕ್ಕೆ ಸಮಾನವಾಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
ಗ್ರಾಮ ನ್ಯಾಯಾಲಯದ ಕಲ್ಪನೆಯೇನೋ ಚೆನ್ನಾಗಿದೆ. ಆದರೆ ಯಾವ ರಾಜ್ಯದಲ್ಲೂ ಇದು ಜನಪ್ರಿಯಗೊಂಡಿಲ್ಲ. ಅಲ್ಲದೆ ವಕೀಲರು ಮತ್ತು ಹೈಕೋರ್ಟ್‌ಗಳು ಇದರ ಬಗ್ಗೆ ಆಸಕ್ತಿ ತೋರಿಲ್ಲ. ಈಗ ಪ್ರತಿ ತಾಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಲಯಗಳಿವೆ. ಅಲ್ಲೇ ತೃಪ್ತಿದಾಯಕ ಮೂಲಭೂತ ಸವಲತ್ತು ಕಲ್ಪಿಸಲು ಸಾಧ್ಯವಾಗಿಲ್ಲ. ನ್ಯಾಯಾಲಯಗಳಲ್ಲಿ ಬಗೆಹರಿಯದ ಪ್ರಕರಣಗಳ ಸಂಖ್ಯೆ ಪ್ರತಿ ದಿನ ಅಧಿಕಗೊಳ್ಳುತ್ತಿವೆ. ಸಿವಿಲ್ ಪ್ರಕರಣಗಳಂತೂ ಬಗೆಹರಿಯದೆ ದಶಕಗಳನ್ನು ಕಂಡಿವೆ. ಇದನ್ನು ಕಡಿಮೆ ಮಾಡಬೇಕೆಂಬ ಉದ್ದೇಶದಿಂದಲೇ ಈಗ ಗ್ರಾಮ ಮಟ್ಟದಲ್ಲಿ ನ್ಯಾಯಾಲಯ ತೆರೆಯುವ ಉದ್ದೇಶವನ್ನು ಸರ್ಕಾರ ವ್ಯಕ್ತಪಡಿಸಿದೆ. ಅಂದರೆ ಗ್ರಾಮ ಮಟ್ಟದಲ್ಲಿ ಈಗ ಹೊಸದಾಗಿ ಮೂಲಭೂತ ಸವಲತ್ತು ಕಲ್ಪಿಸಬೇಕು. ಮೊದಲನೆಯದಾಗಿ ಕಟ್ಟಡಗಳು ಲಭ್ಯವಿರುವುದಿಲ್ಲ. ನ್ಯಾಯಾಂಗ ಇಲಾಖೆಯ ಸಿಬ್ಬಂದಿಯ ಪ್ರಮಾಣವನ್ನು ಹೆಚ್ಚಿಸಬೇಕು. ಗ್ರಾಮಗಳಲ್ಲಿ ವಸತಿ ಸೌಲಭ್ಯ ಕಲ್ಪಿಸಿಕೊಡುವುದು ಬಹಳ ಕಷ್ಟ. ತಾಲೂಕು ಕೇಂದ್ರಗಳಲ್ಲಿ ವಾಸಿಸುವವರು ಹಳ್ಳಿಗೆ ಬೆಳಗ್ಗೆ ಬಂದು ಸಂಜೆ ಹಿಂತಿರುಗುವವರ ಸಂಖ್ಯೆ ಅಧಿಕಗೊಳ್ಳುತ್ತದೆ. ಸರ್ಕಾರಿ ಶಾಲೆಯ ಪರಿಸ್ಥಿತಿ ಈ ನ್ಯಾಯಾಲಯಗಳಿಗೂ ಬಂದರೆ ಆಶ್ಚರ್ಯವೇನೂ ಇಲ್ಲ.
ಕೇಂದ್ರ ಸರ್ಕಾರ ಪ್ರತಿ ಗ್ರಾಮದಲ್ಲಿ ನ್ಯಾಯಾಲಯ ಸ್ಥಾಪನೆಗೆ ಅನುದಾನ ನೀಡುತ್ತದೆ. ಅಲ್ಲದೆ ಕೆಲವು ವರ್ಷಗಳ ನಿರ್ವಹಣೆಯ ವೆಚ್ಚದಲ್ಲಿ ಸ್ವಲ್ಪಭಾಗವನ್ನೂ ಭರಿಸುತ್ತದೆ. ಆದರೆ ಸರ್ಕಾರಿ ಕಡತಗಳು ಸಾಮಾನ್ಯವಾಗಿ ತಾಲೂಕು ಕೇಂದ್ರಗಳಿರುತ್ತವೆ. ಅವುಗಳನ್ನು ಗ್ರಾಮಮಟ್ಟದಲ್ಲಿ ಸಂರಕ್ಷಿಸುವ ಕೆಲಸ ನಡೆಯಬೇಕು. ಸಿವಿಲ್ ಪ್ರಕರಣಗಳಲ್ಲಿ ಅತಿ ಹೆಚ್ಚು ಎಂದರೆ ಕಂದಾಯ ಇಲಾಖೆಗೆ ಸೇರಿದ್ದೇ ಇರುತ್ತದೆ. ಅಲ್ಲಿ ಕಂಪ್ಯೂಟರೀಕರಣ ಸಾಕಷ್ಟು ಪ್ರಮಾಣದಲ್ಲಿ ಆಗಿದ್ದರೂ ಇನ್ನೂ ಸಿಬ್ಬಂದಿಯನ್ನು ಅವಲಂಬಿಸುವುದು ಅನಿವಾರ್ಯ. ನ್ಯಾಯಾಲಯ ಎಂದ ಮೇಲೆ ಪ್ರತಿಯೊಂದಕ್ಕೂ ದಾಖಲೆ ಅಗತ್ಯ. ಅಲ್ಲದೆ ಗ್ರಾಮ ಮಟ್ಟದಲ್ಲಿ ವಕೀಲರು ಇರುವುದಿಲ್ಲ. ಅವರು ಗ್ರಾಮಗಳಿಗೆ ಬರಲು ಒಪ್ಪಬೇಕು. ಈಗಿನ ನ್ಯಾಯಾಲಯಗಳಲ್ಲಿ ಇತ್ಯರ್ಥವಾಗದೇ ಇರುವ ಪ್ರಕರಣಗಳು ಅಧಿಕಗೊಂಡಿವೆ ಎಂದು ಜನತಾ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ನ್ಯಾಯಾಲಯದ ಹಳೆ ವಿವಾದಗಳನ್ನು ರಾಜಿ ಮೂಲಕ ಬಗೆಹರಿಸುವ ಕೆಲಸ ನಡೆಯುತ್ತಿದೆ. ಅಪಘಾತ ಪರಿಹಾರ ಪ್ರಕರಣಗಳು ಹೆಚ್ಚಾಗಿ ಇದರಲ್ಲಿ ಬಗೆಹರಿಯುತ್ತವೆ. ಯಾವುದೇ ಪ್ರಕರಣವಾಗಲಿ ಎರಡು ಬಾರಿ ವಿಚಾರಣೆಗೆ ಬರಬೇಕು. ಮೂರನೇ ಬಾರಿ ಮುಂದೂಡುವಂತಿಲ್ಲ ಎಂದು ನಿಯಮ ಮಾಡಿದರೆ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವಿಲೇವಾರಿ ಆಗಲಿವೆ. ಜಿಲ್ಲಾ ಪಂಚಾಯತ್ ಕಾಯ್ದೆಯನ್ನು ರಚಿಸಿದ ಅಬ್ದುಲ್ ನಜೀರ್ ಸಾಬ್ ತಮ್ಮ ಮೂಲ ಕಾಯ್ದೆಯಲ್ಲಿ ನ್ಯಾಯ ಪಂಚಾಯ್ತಿ ಬಗ್ಗೆ ಪ್ರಸ್ತಾಪಿಸಿದ್ದರು. ಅದರ ಬಗ್ಗೆ ಹೆಚ್ಚು ಜನರು ಆಸಕ್ತಿ ತೋರಲಿಲ್ಲ. ಗ್ರಾಮ ಮಟ್ಟದಲ್ಲಿ ನ್ಯಾಯಾಲಯ ಬಂದಲ್ಲಿ ಜನ ಸಣ್ಣಪುಟ್ಟ ಕಾರಣಗಳಿಗೂ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಾರೆ ಎಂಬ ಅವ್ಯಕ್ತ ಭಯವಿದೆ. ಅಲ್ಲದೆ ಗ್ರಾಮ ಮಟ್ಟದಲ್ಲಿ ಸಂಚಾರಿ ನ್ಯಾಯಾಲಯ ಸ್ಥಾಪಿಸುವ ಬಗ್ಗೆ ಹೈಕೋರ್ಟ್ ಒಲವು ತೋರಿರಲಿಲ್ಲ. ಕೊರೊನಾ ಬಂದು ಹೋದ ಮೇಲೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸುವ ಪರಿಪಾಠ ಅಧಿಕಗೊಂಡಿದೆ.