ಮೀಟರ್‌ನೊಂದಿಗೆ ವಿಧಾನಸೌಧ ಚಲೋ

Advertisement

ಬಾಗಲಕೋಟೆ(ರಬಕವಿ-ಬನಹಟ್ಟಿ): ಸರ್ಕಾರವು ಒಂದೆಡೆ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್‌ವರೆಗೂ ಉಚಿತ ವಿದ್ಯುತ್ ನೀಡುವ ಯೋಜನೆ ರೂಪಿಸುವದರಲ್ಲಿ ತಲ್ಲೀಣವಾಗಿದ್ದರೆ, ಇತ್ತ ನೇಕಾರರು ವಿದ್ಯುತ್ ಬಿಲ್ ಹಣ ತುಂಬದೆ ಸರ್ಕಾರದ ವಿದ್ಯುತ್ ದರ ಏರಿಕೆ ಖಂಡಿಸಿ ಬೀದಿಗೆ ಬಿದ್ದು ಹೋರಾಟ ನಡೆಸುತ್ತಿದ್ದಾರೆ.
ರಾಜ್ಯದ ನೇಕಾರ ವಲಯದಲ್ಲಿ ಅದರಲ್ಲೂ ಬಾಗಲಕೋಟೆ ಜಿಲ್ಲೆಯ ಹೆಸ್ಕಾಂನ ರಬಕವಿ ಉಪವಿಭಾಗದ ರಬಕವಿ-ಬನಹಟ್ಟಿ ಹಾಗೂ ತೇರದಾಳ ಪಟ್ಟಣಗಳಲ್ಲಿ ಅತ್ಯಧಿಕ ನೇಕಾರಿಕೆ ಹೊಂದಿರುವ ಪ್ರದೇಶವಾಗಿದ್ದಲ್ಲದೆ ಅತಿ ಹೆಚ್ಚು ವಿದ್ಯುತ್ ಬಳಸುವ ಕೇಂದ್ರವೂ ಆಗಿದೆ.
ಮಗ್ಗಗಳಿಗೆ ಬಳಕೆಯಾಗುವ ಮೋಟಿಪಾವರ್ ಬಳಸುವ ನೇಕಾರ ಗ್ರಾಹಕರು ಒಟ್ಟು ೩,೧೨೮ ಕುಟುಂಬಗಳಿದ್ದು, ಇದರಲ್ಲಿ ಮೇ ತಿಂಗಳ ಅವಧಿಯ ಬಿಲ್‌ನ್ನು ಜೂನ್ ಕೊನೆಯ ದಿನವಾದರೂ ಕೇವಲ ೬೯೯ ಕುಟುಂಬಗಳು ಮಾತ್ರ ಹೆಸ್ಕಾಂಗೆ ಬಿಲ್ ಹಣ ಸಂದಾಯ ಮಾಡಿವೆ.
ಕಳೆದ ಮೇ ತಿಂಗಳ ಹೆಸ್ಕಾಂನ ರಬಕವಿ ಘಟಕಕ್ಕೆ ಬರಬೇಕಾದ ೧.೪೪ ಕೋಟಿ ರೂ.ಗಳಲ್ಲಿ ಕೇವಲ ೧೩ ಲಕ್ಷ ರೂ.ಗಳಷ್ಟು ಮಾತ್ರ ಜಮೆಯಾಗಿರುವದು ಆತಂಕಕಾರಿ ವಿಷಯವಾಗಿದ್ದು, ಶೇ.೨೦ ರಷ್ಟು ಮಾತ್ರ ನೇಕಾರರು ಹಣ ಸಂದಾಯ ಮಾಡಿದ್ದು, ಇನ್ನುಳಿದ ನೇಕಾರರು ಸುತಾರಾಂ ಹಣ ತುಂಬದೆ ಬಿಲ್‌ಗಳನ್ನು ಹರಿದು ಹಾಕಿದ ಘಟನೆಗಳು ನಡೆದಿವೆ.
ಬಿಲ್ ಕಟ್ಟದಿರಲು ನಿರ್ಧಾರ:
ವಿದ್ಯುತ್ ಮಗ್ಗಗಳ ನೇಯ್ಗೆ ಮಾಡುವ ನೇಕಾರರು ಈಗಾಗಲೇ ಸಭೆ ಸೇರಿ, ನೇಕಾರರಿಗೆ ೧.೨೫ ರೂ.ಗಳ ಸಬ್ಸಿಡಿ ಯೋಜನೆಯಡಿಯಲ್ಲಿ ವಿದ್ಯುತ್ ಒದಗಿಸುವದನ್ನು ನಿಲ್ಲಿಸಬಾರದು. ಈಗಾಗಲೇ ಹೆಚ್ಚಳಗೊಂಡಿರುವ ವಿದ್ಯುತ್ ಬಿಲ್‌ನ್ನು ಯಾವದೇ ಕಾರಣಕ್ಕೂ ತುಂಬುವದಿಲ್ಲ. ಎಲ್ಲ ನೇಕಾರರ ಬಿಲ್‌ಗಳನ್ನು ವಾಪಸ್ ಪಡೆದು ಸರಿದೂಗಿಸಿ ಸಬ್ಸಿಡಿ ಬಿಲ್ ನೀಡಬೇಕೆಂಬ ಕೂಗು ಜೋರಾಗಿದೆ.
ಸರ್ಕಾರ ಮಟ್ಟದಲ್ಲಿ ಮಾತುಕತೆಯೊಂದಿಗೆ ಇತ್ಯರ್ಥವಾಗುವವರೆಗೂ ವಿದ್ಯುತ್ ಬಿಲ್ ಪಾವತಿಸುವದಿಲ್ಲವೆಂಬ ಸ್ಪಷ್ಟ ಸಂದೇಶ ನೇಕಾರರದ್ದಾಗಿದೆ. ೨೦ ಎಚ್‌ಪಿವರೆಗೂ ಉಚಿತ ವಿದ್ಯುತ್‌ನ ಆಶ್ವಾಸನೆಯಂತೆ ಸರ್ಕಾರ ನಡೆಯಬೇಕೆಂಬ ಕೂಗು ತೀವ್ರವಾಗಿದೆ.
ವಿಧಾನಸೌಧ ಚಲೋ:
ನೇಕಾರರಿಗೆ ಕಳೆದ ೨೦ ವರ್ಷಗಳಿಂದ ಪ್ರತಿ ಯೂನಿಟ್‌ಗೆ ೧.೨೫ ರೂ.ರಷ್ಟು ರಿಯಾಯ್ತಿ ದರ ಮುಂದುವರೆಸದಿದ್ದಲ್ಲಿ ವಿದ್ಯುತ್ ಮೀಟರ್‌ಗಳನ್ನು ಕಿತ್ತು ವಿಧಾನಸೌಧ ಚಲೋ ಚಳುವಳಿ ಮಾಡುವ ನಿಶ್ಚಿತವೆಂದು ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಬಹಿರಂಗವಾಗಿ ತಿಳಿಸಿದ್ದು, ಯಾವದೇ ಕಾರಣಕ್ಕೂ ನೇಕಾರರು ಬಿಲ್ ಹಣ ಸಂದಾಯ ಮಾಡುವದಿಲ್ಲ. ಹೆಸ್ಕಾಂನಿಂದ ವಿದ್ಯುತ್ ಕಟ್ ಮಾಡಲು ಅವಕಾಶ ನೀಡುವದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.