ರಾಜ್ಯದಲ್ಲಿ ಎಲ್ಲ ಕಡೆ ವಿದ್ಯುತ್ ಬಿಲ್ ಅವಾಂತರಗಳು ಗ್ರಾಹಕರಿಗೆ ಶಾಕ್ ನೀಡಿದ್ದಲ್ಲದೆ ಸದ್ಯದಲ್ಲಿ ಯಾವುದೂ ಸರಿದಾರಿಗೆ ಬರುವ ಲಕ್ಷಣ ಕಂಡು ಬರುತ್ತಿಲ್ಲ. ರಾಜ್ಯದ ೫ ವಿದ್ಯುತ್ ವಿತರಣ ಕಂಪನಿಗಳು ಯಾವುದೂ ಉತ್ತಮವಾಗಿ ಕೆಲಸ ಮಾಡುತ್ತಿಲ್ಲ. ೧೯೯೯ ರಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ರಚಿಸಿ ವಿದ್ಯುತ್ ಉತ್ಪಾದನೆ, ವಿದ್ಯುತ್ ಪ್ರಸರಣ, ವಿದ್ಯುತ್ ವಿತರಣೆಗೆ ಪ್ರತ್ಯೇಕ ನಿಗಮಗಳನ್ನು ರಚಿಸಲಾಗಿದೆ. ಅಲ್ಲದೆ ವಿದ್ಯುತ್ ಖರೀದಿಯನ್ನು ನೋಡಿಕೊಳ್ಳುವುದಕ್ಕೆ ಪಿಸಿಕೆಎಲ್ ಎಂಬ ಸಂಸ್ಥೆ ಸ್ಥಾಪಿಸಲಾಗಿದೆ. ಇದು ಕೆಇಆರ್ಸಿ ಹಿಡಿತಕ್ಕೆ ಬರುವುದೇ ಇಲ್ಲ. ಪ್ರತಿ ವರ್ಷ ವಿದ್ಯುತ್ ದರ ಅಧಿಕಗೊಳ್ಳುತ್ತಿದೆಯೇ ಹೊರತು ಗ್ರಾಹಕರಿಗೆ ಸವಲತ್ತು ಉತ್ತಮಗೊಂಡಿಲ್ಲ. ಈಗ ಹೊಸ ಸರ್ಕಾರ ರಚನೆಯಾಗುವುದಕ್ಕೆ ಮೊದಲೇ ವಿದ್ಯುತ್ ರಂಗದ ಅವ್ಯವಸ್ಥೆ ಉತ್ತುಂಗ ಶಿಖರ ತಲುಪಿದೆ. ಹಿಂದೆ ಸಾರ್ವಜನಿಕ ವಿಚಾರಣೆಗೆ ಮಹತ್ವ ಇತ್ತು. ಸರ್ಕಾರ ಭಾಗ್ಯಜ್ಯೋತಿ, ಕುಟೀರಜ್ಯೋತಿ, ರೈತರ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ ನೀಡಲು ಆರಂಭಿಸಿದ ಮೇಲೆ ಜನರು ಸಾರ್ವಜನಿಕ ವಿಚಾರಣೆಗೆ ಬರುವುದು ಕಡಿಮೆಯಾಯಿತು.
ಈಗ ಸರ್ಕಾರ ೨೦೦ ಯೂನಿಟ್ವರೆಗೆ ಉಚಿತ ವಿದ್ಯುತ್ ಎಂದು ಹೇಳಿರುವುದರಿಂದ ಗೃಹ ಬಳಕೆದಾರರು ವಿಚಾರಣೆಗೆ ಬರುವುದಿಲ್ಲ. ಈಗ ಹೆಚ್ಚಿನ ಹೊರೆ ಹೊರುತ್ತಿರುವುದು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರು ಮಾತ್ರ. ಅವರನ್ನು ಪ್ರತಿನಿಧಿಸುವ ಸಂಸ್ಥೆಗಳು ಮಾತ್ರ ವಿಚಾರಣೆಗೆ ಬರುತ್ತಿವೆ. ಇದರಿಂದ ಕೆಇಆರ್ಸಿ ಪ್ರತಿ ವರ್ಷ ವಿದ್ಯುತ್ ದರ ಹೆಚ್ಚಿಸುವ ಕೆಲಸ ಬಿಟ್ಟು ಬೇರೇನೂ ಮಾಡಿಲ್ಲ. ಗ್ರಾಹಕನಂತೂ ಲೆಕ್ಕಕ್ಕೇ ಇಲ್ಲ. ಹಿಂದೆ ಸರ್ಕಾರವೇ ವಿದ್ಯುತ್ ದರ ನಿಗದಿಪಡಿಸುತ್ತಿತ್ತು. ಆಗ ಶಾಸಕರು ಆಸಕ್ತಿವಹಿಸುತ್ತಿದ್ದರು. ಈಗ ಯಾವ ಜನಪ್ರತಿನಿಧಿಯೂ ಚಕಾರ ಎತ್ತಿಲ್ಲ. ಹೀಗಾಗಿ ಈ ವರ್ಷ ಪ್ರತಿ ಯೂನಿಟ್ಗೆ ೭೦ ಪೈಸೆ ಹೆಚ್ಚಿಸಿ ಕೆಇಆರ್ಸಿ ಆದೇಶ ಹೊರಡಿಸಿತು. ವಿಧಾನಸಭೆ ಚುನಾವಣೆ ಬಂದಿತು ಎಂದು ಆದೇಶ ಹೊರಡಿಸುವುದನ್ನು ಮೇ ೧೨ಕ್ಕೆ ಮುಂದೂಡಿ ಆದೇಶ ಹೊರಡಿಸಿ, ಏಪ್ರಿಲ್ ೧ರಿಂದ ಪೂರ್ವಾನ್ವಯ ಎಂದಿತು. ಅದರೊಂದಿಗೆ ನಿಗದಿತ ಶುಲ್ಕವನ್ನು ಪ್ರತಿ ಕೆವಿಗೆ ೧೧೦ ರೂ. ಎಂದಿತು. ಇದಾದ ಮೇಲೆ ವಿದ್ಯುತ್ ದರ ಹೊಂದಾಣಿಕೆ ಎಂದು ಪ್ರತಿ ಯೂನಿಟ್ಗೆ ೫೦ ಪೈಸೆ ಹೆಚ್ಚಿಸಿತು. ಇದೂ ಕೂಡ ಏಪ್ರಿಲ್ನಿಂದ ಪೂರ್ವಾನ್ವಯ ಎಂದು ಹೇಳಿದ್ದರಿಂದ ಎರಡು ತಿಂಗಳ ಬಿಲ್ ಒಂದೇ ಬಾರಿ ನೀಡಿದ್ದರಿಂದ ಎಲ್ಲ ಗ್ರಾಹಕರಿಗೆ ಸಾವಿರಾರು ರೂ. ಬಿಲ್ ನೀಡಲಾಯಿತು. ಇದರಿಂದ ಎಲ್ಲ ಕಡೆ ಗ್ರಾಹಕರು ಬೀದಿಗಿಳಿದು ಹೋರಾಟ ಮಾಡಿದ್ದಾರೆ. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿದ್ಯುತ್ ಬಿಲ್ ಪುನರ್ ಪರಿಶೀಲನೆ ಇಲ್ಲ ಎಂದಿದ್ದಾರೆ. ಕೆಇಆರ್ಸಿ ನಿಯಮದಂತೆ ಎರಡು ತಿಂಗಳ ವಿದ್ಯುತ್ ಬಿಲ್ ಒಟ್ಟಿಗೆ ಸಂಗ್ರಹಿಸಲು ಬರುವುದಿಲ್ಲ. ಅಲ್ಲದೆ ಇಂಧನ ದರ ಹೊಂದಾಣಿಕೆಯನ್ನು ಆಯಾ ತಿಂಗಳು ಸಂಗ್ರಹಿಸಬೇಕು ಎಂದು ನಿಯಮ ಹೇಳುತ್ತದೆ. ಅದರ ಪಾಲನೆಯಾಗುತ್ತಿಲ್ಲ. ವಿದ್ಯುತ್ ವಿತರಣ ಕಂಪನಿಗಳು ನಿಯಮ ಉಲ್ಲಂಘಿಸಿದರೆ ಅದನ್ನು ಪರಿಶೀಲಿಸಬೇಕು. ಆ ಕೆಲಸ ನಡೆಯುತ್ತಿಲ್ಲ. ವಿದ್ಯುತ್ ನಷ್ಟ ಶೇ.೧೨.೯೫ ಎಂದಿದೆ. ಇದನ್ನು ಕಡಿಮೆ ಮಾಡಲು ಕ್ರಮ ಕೈಗೊಂಡಲ್ಲಿ ಜನರ ಹೊರೆ ಕಡಿಮೆ ಮಾಡಬಹುದು.
ಆ ಕೆಲಸದಲ್ಲೂ ಪ್ರಗತಿ ಕಂಡು ಬಂದಿಲ್ಲ. ಬೇಡಿಕೆ ಆಧಾರದ ಮೇಲೆ ವಿದ್ಯುತ್ ನೀಡುವ ಪದ್ಧತಿಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಯೋಗ ಸೂಚನೆ ನೀಡಿದರೂ ಪಾಲನೆಯಾಗುವುದಿಲ್ಲ. ಹಿಂದೆ ಆಯೋಗದಲ್ಲಿ ಗ್ರಾಹಕರ ಕುಂದು ಕೊರತೆಗಳನ್ನು ನೋಡಿಕೊಳ್ಳಲು ಒಬ್ಬರು ಅಧಿಕಾರಿ ಇದ್ದರು. ಈಗ ಅವರಿಲ್ಲ. ವಿದ್ಯುತ್ ಲೋಕಾಯುಕ್ತ ಮಾತ್ರ ಇದ್ದಾರೆ. ಅಲ್ಲಿ ವಿತರಣ ಕಂಪನಿಗಳ ಅಧಿಕಾರಿ ಮೇಲೆ ಕ್ರಮ ಕೈಗೊಂಡ ಪ್ರಕರಣಗಳು ಹೆಚ್ಚು ವರದಿಯಾಗುತ್ತಿಲ್ಲ. ಕೆಇಆರ್ಸಿಯಲ್ಲಿ ಗ್ರಾಹಕರ ಮಾತುಗಳಿಗೆ ಬೆಲೆಯೇ ಇಲ್ಲ. ಹಿಂದೆ ಎಲ್ಲ ವರ್ಗಗಳ ಪ್ರತಿನಿಧಿಗಳು ಇರುವ ಸಮಿತಿ ಇತ್ತು. ಈಗ ಅದು ನಿಷ್ಕ್ರಿಯಗೊಂಡಿದೆ. ಆಯೋಗ ಅಧ್ಯಕ್ಷರು ನ್ಯಾಯಾಂಗದಿಂದ ಬಂದಿರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ಹಿರಿಯ ಐಎಎಸ್ ಅಧಿಕಾರಿಗಳು ನಿವೃತ್ತಿಯಾದ ಕೂಡಲೇ ಅವರಿಗೆ ಪುನರ್ವಸತಿ ಕಲ್ಪಿಸಿಕೊಡಲು ಈ ಆಯೋಗ ಇದೆ ಎಂಬ ಭಾವನೆ ಜನರಲ್ಲಿ ಮೂಡಿದೆ. ಇಡೀ ರಾಜ್ಯದಲ್ಲಿ ಜನ ದುಬಾರಿ ವಿದ್ಯುತ್ ಬಿಲ್ ಬಗ್ಗೆ ಕೂಗೆಬ್ಬಿಸಿದ್ದರೂ ಆಯೋಗ ಮೌನವಹಿಸಿದೆ. ಹಿಂದೆ ಆಯೋಗ ಹಲವು ಸ್ವಯಂ ದೂರು ದಾಖಲಿಸಿಕೊಂಡು ತನಿಖೆ ನಡೆಸಿತ್ತು.
ಈಗ ಅಂಥ ಸನ್ನಿವೇಶಗಳು ಕಂಡು ಬರುತ್ತಿಲ್ಲ. ಜನಸಾಮಾನ್ಯರಿಗೆ ಆಯೋಗ ಇರುವುದೇ ತಿಳಿಯದಂತಾಗಿದೆ. ಆಯೋಗ ಕೈಗೊಂಡ ತೀರ್ಮಾನವನ್ನು ಮೇಲ್ಮನವಿ ಪ್ರಾಧಿಕಾರದಲ್ಲಿ ಪ್ರಶ್ನಿಸಬೇಕು. ಇಲ್ಲವೆ ಹೈಕೋರ್ಟ್ಗೆ ಹೋಗಬೇಕು. ಹೀಗಾಗಿ ಶ್ರೀಮಂತ ಉದ್ಯಮಿಗಳು ಮಾತ್ರ ಮೇಲ್ಮನವಿ ಸಲ್ಲಿಸುವಂತಾಗಿದೆ. ಜನಸಾಮಾನ್ಯರು ದುಬಾರಿ ವಿದ್ಯುತ್ ಪಾವತಿಸಬೇಕೆ ಹೊರತು ಬೇರೆ ಮಾರ್ಗವೇ ಇಲ್ಲ. ಕೆಇಅರ್ಸಿ ರಚನೆಯಾದಾಗ ಜನ ಇದರಿಂದ ತಮ್ಮ ವಿದ್ಯುತ್ ಸಮಸ್ಯೆಗಳು ಬಗೆಹರಿಯುತ್ತದೆ ಎಂದು ಭಾವಿಸಿದ್ದರು. ಈಗ ಹಳೆಯ ವ್ಯವಸ್ಥೆಯೇ ಉತ್ತಮ ಎನ್ನುವಂತಾಗಿದೆ. ಕೇಂದ್ರ ಸರ್ಕಾರ ತನ್ನದೇ ಆದ ವಿದ್ಯುತ್ ನೀತಿಯನ್ನು ಪ್ರಕಟಿಸುತ್ತದೆ. ಕೆಇಆರ್ಸಿ ತನ್ನದೇ ಆದ ನಿರ್ದೇಶನಗಳನ್ನು ನೀಡುತ್ತದೆ. ವಿದ್ಯುತ್ ವಿತರಣ ಕಂಪನಿಗಳು ಮನಬಂದಂತೆ ವಿದ್ಯುತ್ ಬಿಲ್ ನೀಡುತ್ತದೆ. ಯಾರಿಗೂ ಯಾರ ಮೇಲೂ ನಿಯಂತ್ರಣ ಇಲ್ಲ. ಈಗ ಉಚಿತ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಬೇಕು. ಎಲ್ಲ ಆ್ಯಪ್ಗಳು ನಿಷ್ಕ್ರಿಯಗೊಳ್ಳುತ್ತಿವೆ. ಒಂದು ಕಡೆ ದುಬಾರಿ ವಿದ್ಯುತ್ ಬಿಲ್, ಮತ್ತೊಂದು ಕಡೆ ಉಚಿತ ವಿದ್ಯುತ್ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗದ ಪರಿಸ್ಥಿತಿ ಇದರಿಂದ ಗ್ರಾಹಕ ಕಂಗೆಟ್ಟಿದ್ದಾನೆ. ಮುಂದಿನ ದಾರಿ ಕಾಣುತ್ತಿಲ್ಲ.