ಮಣಿಪುರದಲ್ಲಿ ಕಳೆದ ೪೦ ದಿನಗಳಿಂದ ಹಿಂಸಾಚಾರ ಮುಂದುವರಿದಿದೆ. ೧೦೦ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ರಾಜ್ಯ ಸರ್ಕಾರಕ್ಕೆ ಹಿಂಸಾಚಾರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಅದರಿಂದ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ರಾಷ್ಟ್ರಪತಿ ಆಳ್ವಿಕೆ ತರುವುದು ಸೂಕ್ತ ಎಂದು ಅಲ್ಲಿಯ ಜನಪ್ರತಿನಿಧಿಗಳೇ ಒತ್ತಾಯಿಸುತ್ತಿದ್ದಾರೆ. ಎರಡು ಪ್ರಬಲ ಕೋಮುಗಳ ನಡುವೆ ಭುಗಿಲೆದ್ದಿರುವ ದ್ವೇಷ ಶಮನಗೊಳ್ಳುವ ಲಕ್ಷಣ ಕಂಡು ಬರುತ್ತಿಲ್ಲ. ಆತಂಕಗೊಂಡ ಜನ ಮಿಜೋರಾಂ ಸೇರಿದಂತೆ ಹಲವು ರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಹೆಚ್ಚು ದಿನ ಆತಂಕದ ದಿನಗಳಲ್ಲಿ ರಾಜ್ಯ ಇರುವುದು ಸರಿಯಲ್ಲ. ಲಿಬಿಯಾ, ಲೆಬನಾನ್ ಮತ್ತಿತರ ದೇಶಗಳಲ್ಲಿ ಕಂಡು ಬರುತ್ತಿರುವ ಅರಾಜಕತೆ ಇಲ್ಲಿಯೂ ತಲೆ ಎತ್ತಿದೆ. ಇದಕ್ಕೆ ಪರಿಹಾರ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಚುನಾಯಿತ ಸರ್ಕಾರ ಇದ್ದಾಗ ಅದನ್ನು ಸುಲಭವಾಗಿ ರದ್ದುಪಡಿಸಲು ಬರುವುದಿಲ್ಲ. ಆದರೆ ಕಾನೂನು ಪರಿಪಾಲನೆ ಕೈಮೀರಿ ಹೋಗಿ ಜನಸಾಮಾನ್ಯರ ರಕ್ಷಣೆಗೆ ಆಪತ್ತು ಕಂಡು ಬಂದಲ್ಲಿ ರಾಷ್ಟçಪತಿ ಆಳ್ವಿಕೆ ಅನಿವಾರ್ಯ.
ಜನಪ್ರತಿನಿಧಿಗಳು ಹಾಗೂ ಸಚಿವರ ಮನೆ ಮೇಲೆ ದಾಳಿ ನಡೆಯುತ್ತಿದೆ. ಸೇನೆ ಇದ್ದರೂ ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ. ಇಂಥ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರದೇಶ ಮಾಡುವುದು ಅನಿವಾರ್ಯ. ಕೇಂದ್ರ ಗೃಹ ಸಚಿವರು ರಾಜ್ಯಕ್ಕೆ ಭೇಟಿ ನೀಡಿದ್ದರೂ ಪ್ರಯೋಜನವಾಗಿಲ್ಲ. ಮಣಿಪುರದ ರಾಜಕೀಯ ಪರಿಸ್ಥಿತಿಯನ್ನು ಹಲವು ವರ್ಷಗಳಿಂದ ಅಧ್ಯಯನ ಮಾಡಿರುವ ಪ್ರೊ. ಖಾನ್‌ಖಾಮ್ ಸುವಾನ್ ಹೌಸಿಂಗ್ ಅವರೇ ರಾಷ್ಟçಪತಿ ಆಳ್ವಿಕೆ ತರುವುದು ಸೂಕ್ತ ಎಂದಿದ್ದಾರೆ. ರಾಜ್ಯದ ಎರಡು ಪ್ರಮುಖ ಸಮುದಾಯಗಳ ನಡುವೆ ಸಮನ್ವಯತೆ ಮೂಡುವುದು ಕಷ್ಟ. ಕುಕಿ ಸಮುದಾಯದವರು ಪ್ರತ್ಯೇಕ ಆಡಳಿತ ವ್ಯವಸ್ಥೆಯನ್ನು ಬಯಸುತ್ತಿದ್ದಾರೆ. ಕರ್ಪ್ಯೂ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕು. ಪ್ರಧಾನಿ ಮೋದಿ ತಮ್ಮ ವರ್ಚಸ್ಸು ಬಳಸಿ ಎರಡೂ ಸಮುದಾಯಗಳನ್ನು ಶಾಂತಿಯನ್ನು ಕಾಪಾಡುವಂತೆ ಹೇಳಬೇಕು. ದೇಶಕ್ಕೆ ಸ್ವಾತಂತ್ರö್ಯ ಬಂದ ದಿನದಿಂದ ಈಶಾನ್ಯ ರಾಜ್ಯಗಳಲ್ಲಿ ಸಮಸ್ಯೆ ಹಲವು ದಶಕಗಳಿಂದ ಮುಂದುವರಿದಿದೆ.
ನೆರೆ ದೇಶಗಳ ಪ್ರಭಾವವೂ ಇದಕ್ಕೆ ಕಾರಣ. ಅಲ್ಲದೆ ನಾಗಾಗಳೂ ಇದ್ದಾರೆ. ಅವರು ನಾಗಾಲ್ಯಾಂಡ್‌ನಲ್ಲಿ ಸೇರ್ಪಡೆಗೊಂಡಲ್ಲಿ ಉಳಿದ ಎರಡು ಪ್ರಮುಖ ಸಮುದಾಯಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬಹುದು. ಆಡಳಿತದಲ್ಲಿರುವ ಸಮುದಾಯ ಬಹುಸಂಖ್ಯೆಯಲ್ಲಿದ್ದರೂ ಪರಿಶಿಷ್ಟ ಪಂಗಡದ ಮೀಸಲಾತಿ ಬಯಸುತ್ತಿರುವುದು ಇಂದಿನ ಸಮಸ್ಯೆಗೆ ಕಾರಣವಾಗಿದೆ. ಕೇಂದ್ರ ಸರ್ಕಾರ ಈಶಾನ್ಯ ರಾಜ್ಯಗಳಿಗೆ ಸಾಕಷ್ಟು ನೆರವು ನೀಡುತ್ತಿದೆ. ಪ್ರತಿಯೊಬ್ಬರಿಗೂ ಮಾಸಿಕ ೮ ಸಾವಿರ ರೂ. ನೆರವು ಲಭಿಸುತ್ತಿದೆ. ಇದರಿಂದ ಅವರಿಗೆ ಹೋರಾಟ ನಡೆಸಲು ಆರ್ಥಿಕ ಆಸರೆ ದೊರಕಿದಂತಾಗಿದೆ.
ಸಮುದಾಯಗಳಲ್ಲದೆ ಹಿಂದೂ, ಕ್ರೈಸ್ತರು ಎಂದು ಧಾರ್ಮಿಕ ವಿಭಜನೆಯೂ ಸಮಸ್ಯೆಯಾಗಿದೆ. ಸಮುದಾಯಗಳ ನಡುವೆ ನಡೆಯುತ್ತಿರುವ ಘರ್ಷಣೆಗಳಿಗೆ ಚರ್ಚ್ ಮತ್ತು ದೇವಾಲಯಗಳು ಬಲಿಯಾಗಿವೆ. ಇದರಿಂದ ಆಯಾ ಧರ್ಮದವರು ಭಾವೋದ್ವೇಗದಿಂದ ವರ್ತಿಸುವುದು ಸಹಜವಾಗಿದೆ. ಇದೆಲ್ಲಕ್ಕೂ ಈಗ ಪೂರ್ಣ ವಿರಾಮ ತರುವುದು ಇಂದಿನ ಅಗತ್ಯ. ರಾಷ್ಟ್ರಪತಿ ಆಳ್ವಿಕೆಯೇ ಸೂಕ್ತ ಎಂದು ಎಲ್ಲರೂ ಹೇಳಲು ಆರಂಭಿಸಿದ್ದಾರೆ. ಸ್ವಾತಂತ್ರ್ಯ ಬಂದ ದಿನದಿಂದ ಈಶಾನ್ಯ ರಾಜ್ಯಗಳು ಕೇಂದ್ರದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ನಿಜ. ಇದರಿಂದ ಹೊರದೇಶಗಳ ಶಕ್ತಿಗಳು ಇಲ್ಲಿ ನೆಲೆಯೂರಿದ್ದವು.
ಈಗ ಕೇಂದ್ರ ಸರ್ಕಾರ ಹೆಚ್ಚು ಆಸ್ಥೆವಹಿಸಿದ್ದರಿಂದ ಈ ಹೊರಗಿನ ಶಕ್ತಿಗಳಿಗೆ ಸ್ಥಳವಿಲ್ಲದಂತಾಗಿದೆ. ಸಂಘರ್ಷ ತಲೆಎತ್ತಲು ಇದೂ ಒಂದು ಕಾರಣ. ಕೇಂದ್ರದ ನೆರವಿನೊಂದಿಗೆ ಆಡಳಿತವನ್ನು ತಹಬಂದಿಗೆ ತರುವುದು ಅಗತ್ಯ. ಸ್ಥಳೀಯ ಸಮುದಾಯಗಳು ತಮ್ಮದೇ ಆದ ರಾಜಕೀಯ ಪಕ್ಷಗಳನ್ನು ಕಟ್ಟಿಕೊಂಡಿರುವುದು ದೇಶದ ಒಕ್ಕೂಟ ವ್ಯವಸ್ಥೆಗೆ ಮಾರಕ. ರಾಷ್ಟ್ರಪತಿ ಪಕ್ಷಗಳು ಸ್ಥಳೀಯ ಸಮುದಾಯಗಳನ್ನು ತಮ್ಮ ಓಟ್ ಬ್ಯಾಂಕ್ ರೀತಿಯಲ್ಲಿ ಬಳಸಿಕೊಳ್ಳುವುದನ್ನು ಕೈಬಿಡಬೇಕು. ಅಲ್ಲಿ ಶಾಂತಿ ನೆಲೆಸಬೇಕು ಎಂದರೆ ಕೇಂದ್ರದ ಕ್ರಮಗಳಿಗೆ ಪ್ರತಿಪಕ್ಷಗಳ ಒತ್ತಾಸೆ ಅಗತ್ಯ. ಈ ವಿಷಯದಲ್ಲಿ ರಾಜಕೀಯ ನುಸುಳಬಾರದು. ಅದರಲ್ಲೂ ಗಡಿ ಭಾಗದಲ್ಲಿರುವ ರಾಜ್ಯಗಳ ರಕ್ಷಣೆಗೆ ವಿಶೇಷ ಮಹತ್ವ ಇದೆ. ಅಲ್ಲಿ ಸುರಕ್ಷತೆ ಮತ್ತು ಸ್ಥಿರ ಸರ್ಕಾರ ಇರುವುದು ಅಗತ್ಯ.
ಒಂದುವೇಳೆ ರಾಜ್ಯ ಸರ್ಕಾರಕ್ಕೆ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಕಷ್ಟವಾದರೆ ರಾಷ್ಟ್ರಪತಿ ಆಳ್ವಿಕೆ ಅನಿವಾರ್ಯ. ಈಗಿನ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ಮೊದಲು ಕಾನೂನು ಪರಿಪಾಲನೆ ಕಟ್ಟುನಿಟ್ಟಾಗಿ ಜಾರಿಗೆ ಬರುವುದು ಮುಖ್ಯ. ಜನಸಾಮಾನ್ಯರಲ್ಲಿ ಸುರಕ್ಷತೆಯ ಭಾವನೆ ಮೂಡಿಸಬೇಕು. ಆ ಕೆಲಸವನ್ನು ಕೇಂದ್ರವೇ ಕೈಗೊಳ್ಳಬೇಕು. ಈಶಾನ್ಯ ರಾಜ್ಯಗಳ ಜನ ದೇಶದ ಮುಖ್ಯವಾಹಿನಿಯಲ್ಲಿ ಸೇರಲು ಬೇಕಾದ ವಾತಾವರಣ ಕಲ್ಪಿಸಿಕೊಡುವುದು ಬಹಳ ಮುಖ್ಯ. ಈಗ ಈಶಾನ್ಯ ರಾಜ್ಯಗಳ ಜನ ದಕ್ಷಿಣ ರಾಜ್ಯಗಳಲ್ಲೂ ನೆಲೆಸುತ್ತಿರುವುದು ಶುಭ ಸೂಚಕ.