ವರ್ತಮಾನದ ಕೆಲಸದಲ್ಲಿ ನಿಲ್ಲುವ ಅಭ್ಯಾಸ

ಗುರುಬೋಧೆ
Advertisement

ಉದ್ವೇಗ (ಟೆನ್ಷನ್) ಇವತ್ತಿನ ಜನರ ಪ್ರಮುಖ ಸಮಸ್ಯೆ. ಉದ್ವೇಗದ ಫಲವಾಗಿ ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಇವತ್ತು ಸರ್ವ ಸಾಮಾನ್ಯವಾಗಿ ಬಿಟ್ಟಿವೆ. ಉದ್ವೇಗವನ್ನು ಪರಿಹರಿಸಿಕೊಳ್ಳಲು ಬೇರೆ ಬೇರೆ ಉಪಾಯಗಳಿವೆ. ಅವುಗಳಲ್ಲಿ ಒಂದು ಉಪಾಯವನ್ನು ಇಲ್ಲಿ ಹೇಳುತ್ತಿದ್ದೇವೆ.

ಮನಸ್ಸನ್ನು ವರ್ತಮಾನ ಕಾಲದಲ್ಲಿ ನಿಲ್ಲಿಸುವ ಅಭ್ಯಾಸವನ್ನು ಮಾಡಬೇಕು. ಅಂದರೆ ವರ್ತಮಾನ ಕಾಲದಲ್ಲಿ ಯಾವ ಕೆಲಸ ಮಾಡುತ್ತಿರುತ್ತೇವೆಯೋ ಆ ಕೆಲಸದಲ್ಲಿಯೇ ಮನಸ್ಸು ನೂರಕ್ಕೆ ನೂರರಷ್ಟು ತೊಡಗಿಕೊಳ್ಳುವಂತೆ ಮಾಡಬೇಕು. ಅನಗತ್ಯವಾಗಿ ಭೂತಕಾಲದ ವಿಷಯಗಳನ್ನು ನೆನಪು ಮಾಡಿಕೊಳ್ಳುವುದು ಮತ್ತು ಭವಿಷ್ಯತ್ ಕಾಲದ ವಿಷಯಗಳನ್ನು ಕಲ್ಪಿಸಿಕೊಳ್ಳುವುದು ಮನಸ್ಸಿನ ಉದ್ವೇಗಕ್ಕೆ ಮುಖ್ಯ ಕಾರಣ.

ಇವೆರಡು ಕಡಿಮೆ ಆಗಲು ವರ್ತಮಾನ ಕಾಲದ ಕೆಲಸದಲ್ಲಿ ಮನಸ್ಸನ್ನು ಪೂರ್ತಿ ತೊಡಗಿಸುವುದು ಇರುವ ಮುಖ್ಯ ಪರಿಹಾರ. ಹೀಗೆ ಮಾಡುವುದರಿಂದ ಮನಸ್ಸು ಹಗುರವಾಗಿರುತ್ತದೆ.ಮನಸ್ಸನ್ನು ಪೂರ್ತಿಯಾಗಿ ತೊಡಗಿಸುವುದರಿಂದ ಕೆಲಸವು ಚೆನ್ನಾಗಿ ಆಗುತ್ತದೆ. ಮನಸ್ಸನ್ನು ಪೂರ್ತಿಯಾಗಿ ತೊಡಗಿಸದೆ ಅರ್ಧಮರ್ಧ ಅವಧಾನದಿಂದ ಮಾಡಿದ ಯಾವುದೇ ಕೆಲಸ ಹಾಳಾಗುತ್ತದೆ. ಕೆಲಸ ಚೆನ್ನಾಗಿ ಆಗುವಿಕೆ ಮನಸ್ಸನ್ನು ವರ್ತಮಾನ ಕೆಲಸದಲ್ಲಿ ತೊಡಗಿಸುವುದರ ಎರಡನೇ ಪ್ರಯೋಜನ. ಮೂರನೆಯದಾಗಿ ಕೈಗೆತ್ತಿಕೊಂಡ ಕೆಲಸವು ಸೂಕ್ತ ವೇಳೆಯಲ್ಲಿ ಮುಗಿಯುತ್ತದೆ. ಕೆಲವೊಮ್ಮೆ ಸೂಕ್ತವೇಳೆಗಿಂದ ಮುಂಚೆಯೇ ಮುಗಿಯುವುದೂ ಉಂಟು.

ಹೀಗೆ ವರ್ತಮಾನ ಕಾಲದ ಕೆಲಸದಲ್ಲಿ ಸಂಪೂರ್ಣ ನಿಗಾವಹಿಸುವುದು ಕರ್ಮಯೋಗದ ಒಂದು ಮುಖ್ಯವಾದ ಮರ್ಮವಾಗಿದೆ. ಕರ್ಮಯೋಗವು ಪ್ರಯೋಜನದ ಬಗ್ಗೆ ಅನಗತ್ಯವಾದ ಚಿಂತೆಯನ್ನು ಬಿಟ್ಟು ಕೆಲಸದ ಬಗ್ಗೆ ಲಕ್ಷ್ಯ ಹಾಕುವುದನ್ನು ಹೇಳುತ್ತದೆ. ಕರ್ಮಯೋಗದಲ್ಲಿ ಕೆಲಸವನ್ನು ದೇವರಿಗೆ ಅರ್ಪಣೆ ಮಾಡುವ ವಿಷಯ ಪ್ರಧಾನವಾಗಿ ಇದೆ. ಜೊತೆಯಲ್ಲಿ ವರ್ತಮಾನದ ಕೆಲಸದಲ್ಲಿಯೇ ನಮ್ಮನ್ನು ನಿಶ್ಚಿಂತೆಯಿಂದ ನಿಲ್ಲಿಸಿಕೊಳ್ಳುವ ಅಂಶವೂ ಇದೆ. ಕರ್ಮಯೋಗದ ಬಗ್ಗೆ ಹೇಳುವಾಗ `ಯೋಗಃ ಕರ್ಮಸು ಕೌಶಲಮ್’ ಎಂಬ ಮಾತು ಬಂದಿದೆ. ಕೆಲಸದಲ್ಲಿ ವಿಶಿಷ್ಟವಾದ ನಿಪುಣತೆಯೇ ಕರ್ಮಯೋಗ , ಆ ನಿಪುಣತೆಗಳಲ್ಲಿ ಮನಸ್ಸನ್ನು ಪೂರ್ತಿಯಾಗಿ ತೊಡಗಿಸುವುದು ಪ್ರಧಾನವಾದದ್ದು . ದೇವರನ್ನು ನಂಬದ ನಾಸ್ತಿಕರೂ ಇದನ್ನು ಅನುಸರಿಸಬಹುದು.

ಇದನ್ನು ಅಭ್ಯಾಸ ಮಾಡುವ ಅಗತ್ಯವಿದೆ. ಚಂಚಲವಾದ ಮನಸ್ಸಿಗೆ ಒಮ್ಮೆಲೆ ನೂರಕ್ಕೆ ನೂರರಷ್ಟು ತೊಡಗಿಕೊಳ್ಳಲು ಸಾಧ್ಯವಾಗುವುದಿಲ್ಲ. ಪ್ರತಿದಿನವೂ ಪೂಜೆ ಮಾಡುವ ರೂಢಿ ಇದ್ದರೆ ಆ ಪೂಜೆಯ ಆರಂಭದಿಂದ ಕೊನೆಯವರೆಗೆ ಬೇರೆ ವಿಷಯವು ನೆನಪಿಗೆ ಬಂದರೂ ಆ ನೆನಪನ್ನು ಬೆನ್ನು ಹತ್ತಿಕೊಂಡು ಹೋಗದೇ ಪೂಜೆಯಲ್ಲಿಯೇ ಮನಸ್ಸನ್ನು ಕೊಡುವ ರೂಢಿ ಮಾಡಬೇಕು.ಯೋಗಾಸನ ಮಾಡುವ ರೂಢಿ ಇದ್ದರೆ ಶರೀರದ ಎಲ್ಲ ಭಂಗಿಗಳನ್ನು ಮನಃ ಪೂರ್ವಕವಾಗಿ ಮಾಡುವ ಅಭ್ಯಾಸ ಮಾಡಬೇಕು. ಹೀಗೆ ಅಭ್ಯಾಸ ಮಾಡಿಕೊಳ್ಳದಿದ್ದರೆ ಜೀವನದ ಗಂಭೀರ ವಿಷಯಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಯಾಕೆಂದರೆ ಗಂಭೀರ ವಿಷಯಗಳು ಎದುರಾದಾಗ ಮನಸ್ಸಿನಲ್ಲಿ ತಲ್ಲಣ ಜಾಸ್ತಿಯಾಗುತ್ತದೆ.ಆದ್ದರಿಂದ ದಿನನಿತ್ಯದ ಬೇರೆ ಕೆಲಸಗಳಲ್ಲಿ ಇದನ್ನು ಅಭ್ಯಾಸ ಮಾಡಿಕೊಂಡು ಗಂಭೀರ ವಿಷಯಗಳಿಗೆ ಸಿದ್ಧತೆ ಮಾಡಿಕೊಂಡಿರಬೇಕು.

ಗುರುಬೋಧೆ