ಸೆಲ್ಯೂಟ್, ಒದೆ ಎರಡೂ ಇದೆ, ನಿಮಗೆ ಯಾವುದು ಬೇಕು ಆಯ್ಕೆ ಮಾಡಿಕೊಳ್ಳಿ

Advertisement

ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಸೆಲ್ಯೂಟ್ ಇರುತ್ತೆ, ಒದೆನೂ ಇರುತ್ತೆ, ಗುಂಡು ಹಾರಿಸೋದು ಇರುತ್ತೆ. ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ ಎಂದು ಗೃಹಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಕೊಠಡಿ ಪೂಜೆ ಮಾಡಿದ ಬಳಿಕ ಮಾತನಾಡಿದ ಅವರು, ಪೊಲೀಸ್ ಇಲಾಖೆ ಶಿಸ್ತಿನ ಇಲಾಖೆ. ಇಲ್ಲಿ ಸೆಲ್ಯೂಟ್ ಸಿಗುತ್ತೆ. ಒದೆನೂ ಸಿಗುತ್ತೆ, ಮುಂದುವರಿದು ಗುಂಡು ಹಾರಿಸೋದು ಇರುತ್ತದೆ. ಆದರೆ ಯಾರಿಗೆ ಯಾವುದು ಬೇಕೋ ತೀರ್ಮಾನ ಮಾಡಿ. ಲಾಠಿ ಏಟು ತಿನ್ನಬೇಕೋ ಅಥವಾ ಗುಂಡು ಹಾರಿಸಿಕೊಳ್ಳಬೇಕೋ ಅಥವಾ ಶಾಂತಿಯಿಂದ ರಾಜ್ಯ ನಡೆಸಬೇಕೋ ಎಂದು ಜನರೇ ತೀರ್ಮಾನ ಮಾಡಲಿ ಎಂದರು.
ಇನ್ನು ಬಜರಂಗದಳ ನಿಷೇಧಿಸುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾರು ಶಾಂತಿ ಕದಡುತ್ತಾರೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಾರೆ ಅಂತಹ ವ್ಯಕ್ತಿ ಅಥವಾ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದೇವೆ. ಅದನ್ನು ಮಾಡಲ್ಲ ಎಂದರೆ ಭಯ ಪಡುವ ಅಗತ್ಯವಿಲ್ಲ. ಮಾಡುತ್ತೇವೆ ಎಂದರೆ ಅವರಿಗೆ ಭಯ ಆಗುತ್ತದೆ. ಕಾನೂನು ಮುರಿಯಲ್ಲ ಎಂದರೆ ಭಯ ಯಾಕೆ? ಎಂದು ಸ್ಪಷ್ಟನೆ ನೀಡಿದರು.