ಗಾಳಿ ಬಂದಾಗ ತೂರಿಕೊ

Advertisement

ಗಾಳಿ ಬಂದಾಗ ತೂರಿಕೋ ಎಂಬ ಕನ್ನಡದ ಗಾದೆ ಮಾತು ಪ್ರಸಿದ್ಧವಾಗಿದೆ. ಹಳೆ ಕಾಲದಲ್ಲಿ ಈಗಿನಂತೆ ಹೊಲದಿಂದ ತಂದ ಧಾನ್ಯಗಳನ್ನು ಹೊಟ್ಟಿನಿಂದ ಬೇರ್ಪಡಿಸಲು ಯಂತ್ರಗಳು ಇರುತ್ತಿರಲಿಲ್ಲ. ಸಹಜವಾಗಿ ಬೀಸುವ ಗಾಳಿಗೆ ಧಾನ್ಯದ ಕಣಗಳನ್ನು ವ್ಯವಸ್ಥಿತವಾಗಿ ಹಾರಿಸಿ ಬಿಡುವ ಮೂಲಕ ಅದರಲ್ಲಿರುವ ಹೊಟ್ಟು ಗಾಳಿಗೆ ಹಾರಿಹೋಗಿ ಧಾನ್ಯ ಶುದ್ಧವಾಗುವಂತೆ ಮಾಡುತ್ತಿದ್ದರು. ಸಹಜವಾದ ಗಾಳಿಯ ಬೀಸುವಿಕೆ ಇಲ್ಲದಿದ್ದಾಗ ಹೀಗೆ ತೂರುವ ಕೆಲಸ ನಡೆಯುವುದಿಲ್ಲ. ಆ ಬಿಡುವಿನ ಹೊತ್ತಿನಲ್ಲಿ ರೈತರು ಬೇರೆ ಕೆಲಸ ಮಾಡಿಕೊಳ್ಳುತ್ತ ಗಾಳಿ ಬೀಸುವುದನ್ನು ಪ್ರತೀಕ್ಷೆ ಮಾಡಿಕೊಳ್ಳುತ್ತಿದ್ದರು. ಮತ್ತೆ ಗಾಳಿ ಬೀಸಲು ಪ್ರಾರಂಭವಾದಾಗ ಮತ್ತೆ ತೂರುವಿಕೆ.
ಬದುಕಿನಲ್ಲಿ ಕೌಮಾರ ಮತ್ತು ಯೌವ್ವನ ಅವಸ್ಥೆಗಳಲ್ಲಿರುವಾಗ ಮೈ ಮನಸ್ಸುಗಳು ಉತ್ಸಾಹದಿಂದ ಕೂಡಿರುತ್ತವೆ. ಆ ಸಂದರ್ಭದಲ್ಲಿಯೆ ಧ್ಯಾನ, ಜಪ ಮತ್ತು ಸ್ತೋತ್ರಗಳ ಸಾಧನೆಗಳನ್ನು ಮಾಡಿಕೊಳ್ಳಬೇಕು. ಮಧ್ಯಮ ವಯಸ್ಸು ಪ್ರಾಪ್ತವಾಯಿತೆಂದರೆ ಈ ಉತ್ಸಾಹ ಇರುವದಿಲ್ಲ. ವೃದ್ಧಾಪ್ಯ ಬಂದ ನಂತರವೂ ಉತ್ಸಾಹ ಬಹುತೇಕ ಬತ್ತಿ ಹೋಗುತ್ತದೆ. ನಿರುತ್ಸಾಹವಿದ್ದಾಗಲೂ ಪ್ರಯತ್ನ ಪೂರ್ವಕವಾಗಿ ಸಾಧನೆಗಳನ್ನು ಮಾಡುವುದೂ ಒಳ್ಳೆಯದೆ ಆದರೂ ಆಗಿನ ಪ್ರಯತ್ನಕ್ಕೆ ಪ್ರಯೋಜನ ಕಡಿಮೆ. ಉತ್ಸಾಹವಿದ್ದಾಗ ಮಾಡಿದ ಸಾಧನೆಗೆ ಹೆಚ್ಚು ಪ್ರಯೋಜನವಿರುತ್ತದೆ. ಪ್ರತಿ ನಿತ್ಯದ ದಿನಚರ್ಯೆಯಲ್ಲಿಯೂ ಕೌಮಾರ, ಯೌವ್ವನ, ಮಧ್ಯಮ ವಯಸ್ಸು ಮತ್ತು ವೃದ್ಧಾಪ್ಯಗಳು ಇರುತ್ತವೆ. ಮಧ್ಯಾಹ್ನ ಮಧ್ಯಮ ವಯಸ್ಸಿಗೆ ಹೋಲುತ್ತದೆ. ಸಾಯಂಕಾಲ ವೃದ್ಧಾಪ್ಯದಂತೆ ಇರುತ್ತದೆ. ಪ್ರಾತಃಕಾಲದಲ್ಲಿ ಧ್ಯಾನ, ಜಪಾದಿಗಳನ್ನು ಮಾಡುವಾಗ ಇರುವ ಉತ್ಸಾಹ ಮಧ್ಯಾಹ್ನದ ಹೊತ್ತಿಗೆ ಕಡಿಮೆಯಾಗಿರುತ್ತದೆ. ಸಾಯಂಕಾಲ ಮತ್ತೂ ಕಡಿಮೆಯಾಗಿರುತ್ತದೆ. ಆದರೆ ಬೆಳಗಿನ ವೇಳೆಯ ಉತ್ಸಾಹವನ್ನು ಉಪಯೋಗಿಸಿಕೊಂಡು ಸಾಧನೆಗಳನ್ನು ಮಾಡಿದರೆ ಅದರ ಪ್ರಭಾವ ಸಂಜೆಯವರೆಗೂ ರಾತ್ರಿಯವರೆಗೂ ಇರುತ್ತದೆ. ಹಾಗೆಯೆ ಕೌಮಾರ, ಯೌವ್ವನಗಳ ಉತ್ಸಾಹವನ್ನು ಉಪಯೋಗಿಸಿಕೊಂಡು ಪೂರ್ವ ವಯಸ್ಸಿನಲ್ಲಿಯೇ ಸಾಧನೆಗಳನ್ನು ಮಾಡಿಕೊಂಡರೆ ಅದರ ಪ್ರಭಾವ ಜೀವನದ ಕೊನೆಯವರೆಗೂ ಉಳಿಯಬಲ್ಲದು. ಸಾಯಂಕಾಲ ಅಥವಾ ರಾತ್ರಿ ದಿನವಿಡೀ ಮಾಡಿದ ಚಟುವಟಿಕೆಗಳು ಮನಸ್ಸಿನಲ್ಲಿ ಸುಳಿಯುತ್ತಿದ್ದು ಸಾಧನೆಗೆ ಅಡ್ಡಿಯಾಗುತ್ತದೆ ಇದೇ ರೀತಿ ವೃದ್ಧಾಪ್ಯದಲ್ಲಿ ಜೀವನವಿಡಿ ಆದ ಘಟನೆಗಳು ಮನಸ್ಸಿನಲ್ಲಿ ಸುಳಿಯುತ್ತವೆ. ಯೌವ್ವನ ಮತ್ತು ಮಧ್ಯಮದ ವಯಸ್ಸಿನ ಅಧ್ಯಾತ್ಮ ಸಾಧನೆಯು ಪ್ರಬಲವಾಗಿದ್ದರೆ ವೃದ್ಧಾಪ್ಯದಲ್ಲಿ ಹೀಗೆ ಸುಳಿಯುವಿಕೆ ಕಡಿಮೆಯಾಗುತ್ತದೆ. ಶರೀರ ಮನಸ್ಸುಗಳು ದುರ್ಬಲವಾಗಿದ್ದರೂ ಹಿಂದಿನ ಪ್ರಭಾವದಿಂದ ಸಾಧನೆ ಮುಂದುವರಿಯುತ್ತದೆ. ಇದು ಸಾಮಾನ್ಯ ನಿಯಮ. ಇದಕ್ಕೆ ಅಪವಾದಉಂಟು. ಹೆಚ್ಚಿನವರಿಗೆ ಅನ್ವಯವಾಗುವುದರಿಂದ ಸಾಮಾನ್ಯ ನಿಯಮವನ್ನಷ್ಟೆ ಇಲ್ಲಿ ಹೇಳಿದ್ದೇವೆ. ಕೌಮಾರ ಮತ್ತು ಯೌವ್ವನಗಳಲ್ಲಿ ಸಾಧನೆಗಳಿಂದಿರುವುದು ಬಹಳ ಮುಖ್ಯ.