ಕಲಾದಗಿಯಲ್ಲಿ ಬಾಯ್ದೆರೆದ ಭೂಮಿ

ಕಲಾದಗಿ
Advertisement

ಕಲಾದಗಿ: ಏಕಾಏಕಿ ಗ್ರಾಮದ ಉಸ್ಮಾನಸಾಬ ರೋಣ ಎಂಬುವವರ ಹೊಲದಲ್ಲಿ ಮಂಗಳವಾರ ಮಧ್ಯಾಹ್ನ ಬೃಹತ್ ಪ್ರಮಾಣದ ಕಂದಕದ ರೂಪದಲ್ಲಿ ಭೂಮಿ ಕುಸಿದಿದ್ದು ಅವರ ಆತಂಕಕ್ಕೆ ಕಾರಣವಾಗಿದೆ.
ಗ್ರಾಮದ ಸಮೀಪದ ಶೇಲ್ಲಿಕೇರಿ ರಸ್ತೆಯಲ್ಲಿರುವ ಅವರ ಹೊಲದಲ್ಲಿ ಅಂದಾಜು ಐವತ್ತು ಅಡಿ ಆಳದಷ್ಟಿರುವ ಕಂದಕ ಅಷ್ಟೇ ಪ್ರಮಾಣದ ಸುತ್ತಳತೆಯನ್ನು ಹೊಂದಿದೆ. ಏಕಾಏಕಿ ಭೂಮಿ ಬಾಯಿಬಿಟ್ಟಿರುವುದು ಅಚ್ಚರಿಯೊಂದಿಗೆ ಆತಂಕಕ್ಕೆ ಕಾರಣವಾಗಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಗೆ ರೋಣ ಅವರ ಹೊಲದ ಬಹುತೇಕ ಭಾಗ ನೀರಿನಿಂದ ಆವೃತ್ತವಾಗಿತ್ತು. ಹೀಗೆ ನಿಂತ ನೀರು ಮಧ್ಯಾಹ್ನದ ಹೊತ್ತಿಗೆ ಹರಿದುಹೋಗುತ್ತಿದ್ದಂತೆ ಅದೇ ಪ್ರದೇಶದಲ್ಲಿ ಈ ಪರಿಯಲ್ಲಿ ಭೂಮಿ ಬಾಯಿಬಿಟ್ಟಿದೆ ಎನ್ನುತ್ತಾರೆ ಉಸ್ಮಾನಸಾಬ್ ರೋಣ.
ಇದೇ ಮೊದಲಲ್ಲಾ:
ಕಳೆದ 2019ರಲ್ಲಿ ಇದೇ ರೀತಿ ಹೆಚ್ಚಿನ ಮಳೆಯಾದಾಗಲೂ ಇದೇ ಸ್ಥಳದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಭೂಮಿಯಲ್ಲಿ ಕಂದಕ ಉಂಟಾಗಿದ್ದನ್ನು ನೆನಪಿಸಿಕೊಳ್ಳುವ ಅವರು ನಮ್ಮ ಹೊಲದಲ್ಲಿ ಒಂದೇ ಪ್ರದೇಶದಲ್ಲಿ ಈ ರೀತಿ ಯಾಕಾಗುತ್ತಿದೆ ಎಂದು ಪ್ರಶ್ನಿಸುತ್ತಿದ್ದು, ಭೂ ವಿಜ್ಞಾನಿಗಳು ಇದಕ್ಕೆ ಉತ್ತರ ನೀಡಬೇಕಾಗಿದೆ.