ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸ್ಥಾನವನ್ನು 2,500 ಕೋಟಿ ರೂಪಾಯಿಗಳಿಗೆ ಮತ್ತು ಸಚಿವ ಸ್ಥಾನಗಳು 500 ಕೋಟಿ ರೂಪಾಯಿಗಳಿಗೆ ಮಾರಟವಾಗಲು ಸಿದ್ಧವಾಗಿದೆ ಎಂದು ಎಐಸಿಸಿ ವಕ್ತಾರ ಪವನ್ ಖೇರಾ ಅವರು ಆರೋಪಿಸಿದ್ದಾರೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಕುರಿತ ರೇಟ್ ಕಾರ್ಡ್ ಬಿಡುಗಡೆ ಮಾಡಿ ಮಾತನಾಡಿದ ಅವರು ‘ಬಿಜೆಪಿಯು ರಾಜ್ಯವನ್ನು ರಾಜಕೀಯ ಪ್ರವಾಸದ ಕೇಂದ್ರ ಮಾಡಿಕೊಂಡಿದೆ. ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ರಾಜ್ಯದಲ್ಲಿ 40% ಅಲ್ಲ 50% ಕಮಿಷನ್ ನಡೆಯುತ್ತಿದೆ. ರಾಜ್ಯದ ಮುಖ್ಯಮಂತ್ರಿ ಹುದ್ದೆಗೆ 2,500 ಕೋಟಿ ಕಮಿಷನ್, ಮಂತ್ರಿ ಹುದ್ದೆಗೆ 500 ಕೋಟಿ, ವರ್ಗಾವಣೆಗೆ 5-15 ಕೋಟಿ, ಇಂಜಿನಿಯರ್ ಹುದ್ದೆಗೆ 1ರಿಂದ 5 ಕೋಟಿ ನೀಡಬೇಕು ಎನ್ನುವ ಮೂಲಕ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ. ಇಂದು ಅತ್ಯಂತ ಮಹತ್ವದ ದಿನ, ಬಿಜೆಪಿ ಜನರ ಗಮನ ಬೇರೆ ಕಡೆ ಸೆಳೆಯಲು ಪ್ರಾರಂಭ ಮಾಡಿದೆ. ಆದರೆ, ಕರ್ನಾಟಕದ ಜನ ಮಾತ್ರ ಎಲ್ಲ ವಿಚಾರಗಳನ್ನು ನೆನಪಿನಲ್ಲಿ ಇಟ್ಟುಕೊಂಡಿದ್ದಾರೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಬಿಡುಗಡೆಯಿಂದ ಜನರಿಗೆ ಬಿಜೆಪಿಯವರ ಬಗ್ಗೆ ಸಿಟ್ಟಿದೆ. ಭ್ರಷ್ಟಾಚಾರದ ರೇಟ್ ಕಾರ್ಡ್ ಬಗ್ಗೆ ಜನರು ಆಕ್ರೋಶಗೊಂಡಿದ್ದಾರೆ. ಇದೇ ಸಿಟ್ಟು ಬಿಜೆಪಿ ವಿರುದ್ದ ಜನರು ಓಟು ಒತ್ತುವಂತೆ ಮಾಡುತ್ತದೆ. ಬಿಜೆಪಿ ಮತ್ತೆ ಬಂದರೆ 40% ಕಮಿಷನ್ ಭ್ರಷ್ಟಾಚಾರ 80% ಆಗುತ್ತದೆ ಎಂಬ ಭಯ ಆತಂಕ ಜನರಿಗೆ ಇದೆ. ಇದೇ ಭಾವನೆಗಳು ಬಿಜೆಪಿಗೆ ಹೊಡೆತ ಕೊಡಲಿದೆ ಎಂದರು. ಭಾರತದ ಅತ್ಯಂತ ಧಾರ್ಮಿಕ ಪಕ್ಷ ಎಂದು ಹೇಳಿಕೊಳ್ಳುವ ಪಕ್ಷವು ಮಠಗಳಿಗೆ ಅನುದಾನ ಬಿಡುಗಡೆ ಮಾಡಲು 30% ಕಮಿಷನ್ ವಿಧಿಸುತ್ತದೆ, ಬಿಜೆಪಿ ‘ಭ್ರಷ್ಟಾಚಾರ ರೇಟ್ ಕಾರ್ಡ್’ ಪಕ್ಷ ಎಂದು ಟೀಕಿಸಿದರು.