ದೇವಲೋಕದಲ್ಲಿ ಇಬ್ಬರು ದೇವಗಂಧರ್ವರು. ಇದ್ದರು. ಇವರಿಬ್ಬರ ಹೆಸರು ಹಹ ಮತ್ತು ಹುಹು ಇವರಿಬ್ಬರಿಗೊಮ್ಮೆ ಸ್ವಲ್ಪ ಆಟವಾಡಬೇಕೆಂದು ಅನಿಸಿ ಒಂದು ಸರೋವರದ ಬಳಿಗೆ ಬಂದರು. ಹಹ ಆನೆಯ ರೂಪವನ್ನು ಹುಹು ಮೊಸಳೆಯ ರೂಪ ಧರಿಸಿ ನೀರಿನೊಳಗೆ ಇಳಿದರು. ಅಲ್ಲಿ ದೇವಲರು ಎಂಬ ಋಷಿಗಳು ತಪಸ್ಸು ಮಾಡುತ್ತಿದ್ದರು. ಆಹ್ನಿಕಕ್ಕಾಗಿ ದೇವಲರು ಸರೋವರಕ್ಕೆ ಬಂದರು.
ಇಬ್ಬರೂ ದೇವಲರನ್ನು ಆನೆ ಮತ್ತು ಮೊಸಳೆಯ ರೂಪದಲ್ಲಿ ಹೆದರಿಸಿದರು. ಆಗ ದೇವರು ಕಣ್ಣು ಮುಚ್ಚಿ ಧ್ಯಾನ ಮಾಡಿದಾಗ, ಈ ಆನೆ ಮತ್ತು ಮೊಸಳೆಯ ನಿಜರೂಪ ತಿಳಿಯಿತು.
ಇದರಿಂದ ಕೋಪಗೊಂಡ ದೇವಲ ಋಷಿಗಳು ಹಹ ಎಂಬುವನಿಗೆ ಆನೆಯಾಗು ಎಂದು, ಹುಹು ವಿಗೆ ಮೊಸಳೆಯಾಗು ಎಂದು ಶಾಪ ನೀಡಿದರು.ಇಬ್ಬರೂ ನಂತರದಲ್ಲಿ ಪಶ್ಚಾತ್ತಾಪಪಟ್ಟು ಋಷಿಗಳಲ್ಲಿ ಕ್ಷಮೆ ಕೇಳಿದಾಗ, ಪರಮಾತ್ಮನೇ ನಿಮ್ಮ ಶಾಪವನ್ನು ಪರಿಹಾರ ಮಾಡುವನು ಎಂದು ತಿಳಿಸಿದರು.
ಹಹ ಮೊದಲು ಭೂಲೋಕದಲ್ಲಿ ಇಂದ್ರದ್ಯುಮ್ನ ಎಂಬ ರಾಜನಾಗಿ ಹುಟ್ಟಿದನು. ಒಂದು ದಿನ ಅವನು ದೇವರ ಪೂಜೆಯನ್ನು ಮಾಡುತ್ತಿದ್ದನು. ಅಲ್ಲಿ ಅಗತ್ಯಮುನಿಗಳು ಬಂದರು. ಋಷಿಗಳು ಬಂದು ಕೂಗುತ್ತಿದ್ದರೂ ಗೊತ್ತಿಲ್ಲದೆ ಹಾಗೇ ಕಣ್ಣು ಮುಚ್ಚಿ ಅಹಂಕಾರದಿಂದ ಕುಳಿತೇ ಇದ್ದನು. ಮುನಿಗಳು ಕೋಪಗೊಂಡು ಮದ್ದಾನೆ ಆಗು ಎಂದು ಶಪಿಸಿದರು. ಅದರಂತೆ ಹಹ ಗಜೇಂದ್ರವೆಂಬ ಆನೆಯಾಗಿ ಭಾರತದ ತ್ರಿಕೂಟ ಪರ್ವತದಲ್ಲಿ ಹುಟ್ಟಿದನು.
ಒಂದು ದಿನ ಹೆಂಡತಿ ಮಕ್ಕಳೊಂದಿಗೆ ಸಂಚಾರ ಮಾಡುತ್ತಿರುವಾಗ ತುಂಬಾ ನೀರಡಿಕೆಯಾಯಿತು. ಅಲ್ಲಿದ್ದ ಸರೋವರದ ಬಳಿಗೆ ಬಂದು ಗಜೇಂದ್ರನೆಂಬ ಆನೆ ನೀರು ಕುಡಿಯಲಿಕ್ಕೆ ತೊಡಗಿತು. ಆ ಸರೋವರದಲ್ಲಿಯೆ ಹುಹು ಎಂಬ ಅವನ ಹಳೆಯ ಸ್ನೇಹಿತನು ಮೊಸಳೆಯಾಗಿ ಹುಟ್ಟಿದ್ದ. ಅವನು ಗಜೇಂದ್ರನ ಕಾಲನ್ನು ಕಚ್ಚಿದನು. ಹೆಂಡತಿ ಮತ್ತು ಮಕ್ಕಳು ಗಜೇಂದ್ರನನ್ನು ಬಿಡಿಸಲಿಕ್ಕೆ ಪ್ರಯತ್ನಿಸಿದರು. ಎಲ್ಲವೂ ವ್ಯರ್ಥವಾಯಿತು. ಹೀಗೆಯೇ ಸಾವಿರಾರು ವರ್ಷ ಹೋರಾಟ ನಡೆಯಿತು.
ನಂತರ ಪರಮಾತ್ಮನು ಭಕ್ತನಾದ ಗಜೇಂದ್ರನನ್ನು ರಕ್ಷಿಸಲು ಚಕ್ರವನ್ನು ಬಿಟ್ಟನು. ಚಕ್ರದಿಂದ ಮೊಸಳೆಯ ತಲೆಯು ಹಾರಿತು. ಈ ಚಕ್ರದ ಸ್ಪರ್ಶದಿಂದ ಹಾಗೂ ಪರಮಾತ್ಮನ ಅನುಗ್ರಹದಿಂದ ಶಾಪವು ಪರಿಹಾರವಾಯಿತು. ನೀತಿ ಏನೆಂದರೆ ದೊಡ್ಡವರನ್ನು ತಮಾಷೆ ಮಾಡಬಾರದು. ಜ್ಞಾನಿಗಳು ಬಂದರೆ ಎದ್ದು ನಿಂತು ಗೌರವಿಸಬೇಕು.