ಹುಬ್ಬಳ್ಳಿ : ಜಗದೀಶ ಶೆಟ್ಟರ ಅವರಿಗೆ ಟಿಕೆಟ್ ತಪ್ಪಲು ಪಕ್ಷದ ಯಾವೊಬವಬ ವ್ಯಕ್ತಿ ಕಾರಣರಲ್ಲ. ಪಕ್ಷದ ವರಿಷ್ಠರ ತೀರ್ಮಾನ. ಶೆಟ್ಟರು ಪಕ್ಷ ಬಿಟ್ಟ ಮೇಲೆ ಏನಾದರೂ ಮಾತಾಡಬಹುದು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವ್ಯಕ್ತಿಗಿಂತ ಪಕ್ಷ ದೊಡ್ಡದು ಎಂಬುದು ನಮ್ಮೆಲ್ಲರಿಗಿಂತ ಜಗದೀಶ ಶೆಟ್ಟರ ಅವರಿಗೆ ಚೆನ್ನಾಗಿ ಗೊತ್ತಿದೆ. ಗೊತ್ತಿದ್ದೂ ಟಿಕೆಟ್ ಸಿಗಲಿಲ್ಲ ಎಂಬ ಕಾರಣವೊಡ್ಡಿ ಪಕ್ಷ ತೊರೆದಿದ್ದಾರೆ ಎಂದರು.
ಯಾರೇ ಪಕ್ಷ ತೊರೆದರೂ ಪಕ್ಷವು ಕಾರ್ಯಕರ್ತರ ಪರಿಶ್ರಮ, ಜನರ ಆಶೀರ್ವಾದದಿಂದ ಸದೃಢವಾಗಿರುತ್ತದೆ. ಈ ಬಾರಿ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಕಾಂಗ್ರೆಸ್ ಪಕ್ಷಕ್ಕೆ 88 ಸ್ಥಾನ ಬಂದರೆ ಹೆಚ್ಚು, ಜೆಡಿಎಸ್ ಒಂದು ಜಿಲ್ಲೆ, ಪ್ರಾಂತಕ್ಕೆ ಸೀಮಿತವಾದ ಪಕ್ಷ. ಹೀಗಾಗಿ ನಮ್ಮ ಪಕ್ಷ ಪೂರ್ಣ ಬಹುಮತ ಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಈ ಬಾರಿ ಕಾರ್ಯಕರ್ತರಿಗೆ, ಐಪಿಎಸ್, ಡಾಕ್ಟರ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ರಾಜಕೀಯದಲ್ಲಿ ಅಸಕ್ತಿ ಮತ್ತು ಜನಸೇವೆ ಮನೋಭಾವ ವುಳ್ಳ 75 ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗ ಮಾಡಿದೆ. ಸೆಂಟ್ರಲ್ ಕ್ಷೇತ್ರದ ನಮ್ಮ ಪಕ್ಷದ ಅಭ್ಯರ್ಥಿ ಮಹೇಶ ಟೆಂಗಿನಕಾಯಿ ಅವರೂ ಪಕ್ಷದ ಸಾಮಾನ್ಯ ಕಾರ್ಯಕರ್ತರು. ಅವರ ಶ್ರಮ ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಇದೇ ರೀತಿ ದಕ್ಷಿಣ ಕನ್ನಡ ಭಾಗದಲ್ಲೂ ಟಿಕೆಟ್ ಕೊಡಲಾಗಿದೆ ಎಂದು ಹೇಳಿದರು.
ಹುಬ್ಬಳ್ಳಿ ಕೇಂದ್ರ ಸ್ಥಾನ ಅದಕ್ಕಾಗಿ ಬರ್ತೇವೆ
ಹುಬ್ಬಳ್ಳಿಗೆ ಬಿಜೆಪಿ ಕೇಂದ್ರ ಮತ್ತು ರಾಜ್ಯ ನಾಯಕರು ಬರುತ್ತಿರುವುದು ಕಿತ್ತೂರು ಕರ್ನಾಟಕದ ಕೇಂದ್ರ ಸ್ಥಾನ ಎಂಬ ಕಾರಣಕ್ಕೆ ಹೊರತು ಶೆಟ್ಟರ ಬಗ್ಗೆ ಸಭೆ ಮಾಡಲು ಅಲ್ಲ. ನಮ್ಮ ಅಭ್ಯರ್ಥಿ ಸೆಂಟ್ರಲ್ ಕ್ಷೇತ್ರದಲ್ಲಿ ಗೆಲ್ಲುತ್ತಾರೆ ಎಂದರು.
ಬಿಜೆಪಿ ಬರೀ ಲಿಂಗಾಯತ ಸಮುದಾಯದವರ ಸಭೆ ನಡೆಸುತ್ತಿಲ್ಲ. ಎಲ್ಲ ಸಮುದಾಯದವರ ಸಭೆ ಮಾಡಿಕೊಂಡು ಬಂದಿದೆ. ಮುಂದೆಯೂ ಮಾಡಲಿದೆ. ಮಂಗಳವಾರ ಯಡಿಯೂರಪ್ಪ ಲಿಂಗಾಯತ ಸಮುದಾಯದ ಮುಖಂಡರ ಸಭೆ ನಡೆಸಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ವೈರಲ್ ವಿಡಿಯೋ ; ಕೇಸ್ ಕೋರ್ಟ್ ನಲ್ಲಿದೆ
ಯಡಿಯೂರಪ್ಪ, ಈಶ್ವರಪ್ಪ, ಶೆಟ್ಟರ ತೆಗೆದು ಹೊಸ ಟೀಮ್ ಕಟ್ಡುತ್ತೇವೆ ಎಂಬ ತುಳು ಭಾಷೆಯಲ್ಲಿ ಸಂಭಾಷಣೆ ನಡೆಸಿದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಟೀಲ್ ಅವರು, ಆ ಅಡಿಯೋ ಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಕೇಸ್ ಹಾಕಿದ್ದೇನೆ. ಹೀಗಾಗಿ ಆ ವಿಚಾರದ ಬಗ್ಗೆ ನಾನು ಗೋಷ್ಠಿಯಲ್ಲಿ ಮಾತನಾಡಲ್ಲ ಎಂದು ಹೇಳಿದರು.
50 ಲಕ್ಷ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಸಂವಾದ
ಪ್ತಧಾನಿ ನರೇಂದ್ರ ಮೋದಿ ಅವರು ಗುರುವಾರ ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ. ಚುನಾವಣೆಯಲ್ಲಿ ಯಾವ ರೀತಿ ಕೆಲಸ ಮಾಡಬೇಕು ಎಂಬುದರ ಬಗ್ಗೆ ಮಾರ್ಗದರ್ಶನ ಮಾಡಲಿದ್ದಾರೆ. ಈ ಮೂಲಕ ಕಾರ್ಯಕರ್ತರಲ್ಲಿ ಚೈತನ್ಯ ತುಂಬಲಿದ್ದಾರೆ ಎಂದು ಹೇಳಿದರು.