ಕೊಪ್ಪಳ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಳೆದ ಬಾರಿ ಬಿಜೆಪಿಗೆ ಹಾಕಲಾದ ಶೇ. ೫೦ರಷ್ಟು ಮತಗಳು ಕಾಂಗ್ರೆಸ್ ಪಕ್ಷಕ್ಕೆ ಬರಲಿವೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ಪ್ರತಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ವೀರೇಂದ್ರ ಪಾಟೀಲ್ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ ೧೭೬ ಸ್ಥಾನ ಕಾಂಗ್ರೆಸ್‌ಗೆ ಬಂದಿದ್ದವು. ಯಡಿಯೂರಪ್ಪ ಮೂಲಕವೇ ಆಪರೇಷನ್ ನಂತಹ ಹೇಯ ಕೃತ್ಯ ಮಾಡಿಸಿದರು. ಆದರೆ, ಲಿಂಗಾಯತ ಸಮುದಾಯದ ನಾಯಕ ಬಿ.ಎಸ್. ಯಡಿಯೂರಪ್ಪರನ್ನು ಅಧಿಕಾರ ಪೂರ್ಣಗೊಳಿಸಲು ಬಿಡಲಿಲ್ಲ. ಅಲ್ಲದೇ ಬೊಮ್ಮಾಯಿಯವರನ್ನು ಹೆಸರಿಗೆ ಮಾತ್ರ ಮುಖ್ಯಮಂತ್ರಿ ಮಾಡಿದ್ದಾರೆ. ಅಧಿಕಾರ ಬೇರೆಯವರ ಕೈಯಲ್ಲಿದೆ. ಹೀಗಾಗಿ ಲಿಂಗಾಯತರು ಬೇಸರಗೊಂಡಿದ್ದು, ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂದರು.
ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ೧೫೦ ಸ್ಥಾನ ಗೆಲ್ಲುವ ಗುರಿ ಹೊಂದಿದ್ದೇವೆ. ಬಹುಮತ ಬಂದಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಎಐಸಿಸಿಯಲ್ಲಿ ಯಾರು ಮುಖ್ಯಮಂತ್ರಿ ಆಗಬೇಕು ಎಂಬುದನ್ನು ತೀರ್ಮಾನ ಮಾಡಲಾಗುತ್ತದೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯ. ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಮುಂದಿನ ಮುಖ್ಯಮಂತ್ರಿಯನ್ನು ಘೋಷಣೆ ಮಾಡಿಲ್ಲ ಎಂದರು.