ಹಲಗೂರು: ಭಾನುವಾರ ರಾತ್ರಿ ಭಾರಿ ಮಳೆ ಬಿದ್ದ ಹೋನಗನ ಹಳ್ಳಿ ಕೆರೆ ತುಂಬಿ ಕೋಡಿ ಒಡೆದ ಪರಿಣಾಮ ಭೀಮ ಜಲಾಶಯ ತುಂಬಿ ಹರಿದ ರಾಷ್ಟ್ರೀಯ ಹೆದ್ದಾರಿಯ ಬಳಿ ಇರುವ ಜಮೀಲ್ ಪಾಷಾ ಎಂಬುವವರ ಆಡು ಸಾಕುವ ಶೆಡ್ಡಿಗೆ ನೀರು ನುಗ್ಗಿ ಅದರಲ್ಲಿದ್ದ 45 ಆಡುಗಳು ಮತ್ತು ಒಂದು ಹಸುವಿನ ಕರ ಮೃತಪಟ್ಟಿದ್ದು ಮೂರು ಹಸುವಿನ ಕರು ಹಾಗು ಶೆಡ್ಡಿನಲ್ಲಿದ್ದ ರಾಜು ಎಂಬುವರನ್ನು ತೆಪ್ಪದ ಮುಖಾಂತರ ಮಧ್ಯರಾತ್ರಿ ರಕ್ಷಣೆ ಮಾಡಲಾಗಿದ್ದು ಇದರಿಂದ ಅವರಿಗೆ ಎಂಟು ಲಕ್ಷಕ್ಕಿಂತ ಹೆಚ್ಚು ನಷ್ಟ ಸಂಭವಿಸಿದೆ.
ಮೂಲತಃ ಹಲಗೂರು ಗ್ರಾಮದ ವಾಸಿ ಜಮೀಲ್ ಪಾಷಾ ಎಂಬುವವರು ಮಾತನಾಡಿ ರಾಷ್ಟ್ರೀಯ ಹೆದ್ದಾರಿಯ ಭರತ್ ಪೆಟ್ರೋಲ್ ಬಂಕ್ ಮುಂಭಾಗ ಭೀಮ ನದಿಯ ಬಳಿ ಆಡು, ಹಸು ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೇನೇ.
ಭಾನುವಾರ ಹಲಗೂರು ಹೋಬಳಿಯಲ್ಲಿ ಭಾರಿ ಮಳೆ ಸುರಿದ ಪರಿಣಾಮ ಹೋನಗನಹಳ್ಳಿ ಕೆರೆ ತುಂಬಿ ಅದರಿಂದ ಹೊರಬಂದ ನೀರು ಹರಿದು ಬಂದು ನಮ್ಮ ಶೆಡ್ಡಿಗೆ ನೀರು ನುಗ್ಗಿದೆ ಅಲ್ಲಿ ಕಾವಲಿಗಿದ್ದ ನಮ್ಮ ಕೆಲಸಗಾರನಾದ ರಾಜು ಎಂಬುವರು ತಕ್ಷಣ ನನಗೆ ದೂರವಾಣಿ ಮುಖಾಂತರ ಮಾಹಿತಿ ನೀಡಿದರು. ತಕ್ಷಣ ಮಳವಳ್ಳಿಯಿಂದ ಬೋಟುಗಳನ್ನು ತರಿಸಿ ತೆಪ್ಪದಲ್ಲಿ ಸೇಡ್ಡಿನ ಹತ್ತಿರ ಹೋಗಿ ಸೇಡ್ಡಿನ ಬಾಗಿಲು ತೆಗೆದಾಗ ಮೃತಪಟ್ಟಿದ್ದ ಆಡುಗಳು ಕೊಚ್ಚಿ ಹೋದವು. ತಕ್ಷಣ ಮೂರು ಕರುಗಳನ್ನು ಹಾಗೂ ರಾಜು ಎಂಬುವನನ್ನು ರಕ್ಷಣೆ ಮಾಡಿಕೊಂಡು ಬಂದಿದ್ದೇವೆ. ಮತ್ತು ನನ್ನ ಮೂರು ಜಟಕಾ ಗಾಡಿಗಳು ಹಾಗೂ ಟಿವಿಎಸ್ ಮೊಪೆಡ್ ಸ್ಕೂಟರ್ ಹಾಗೂ ಒಮಿನಿ ಕಾರು ನೀರಿನಲ್ಲಿ ಮುಳುಗಿದ್ದು ಶೆಡ್ಡಿನಲ್ಲಿ ಒಂದು ಹಸುವಿನ ಕರು ಹಾಗೂ ಹಲವು ಆಡಿನ ಶವಗಳು ದೊರಕಿದೆ. ಇದರಿಂದ ನಮಗೆ ಎಂಟು ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಭೀಮಾ ನದಿ ಅಕ್ಕ ಪಕ್ಕದಲ್ಲಿದ್ದ ಎಲೆ ತೋಟ, ಇಟ್ಟಿಗೆ ಫ್ಯಾಕ್ಟರಿ ಮತ್ತು ಇತರ ಬೆಳೆಗಳು ಪೂರ್ಣ ನಷ್ಟ ಕೊಳಗಾಗಿದೆ. ಹಾಗೂ ವೀರಶೈವ ರುದ್ರಭೂಮಿಯು ಸಹ ಜಲ ವೃತವಾಗಿತ್ತು.
ರಾಷ್ಟ್ರೀಯ ಹೆದ್ದಾರಿಯಿಂದ ಮುತ್ತತ್ತಿಗೆ ಹೋಗುವ ರಸ್ತೆ ಪೂರ್ಣಗೊಂಡಿಲ್ಲದ ಕಾರಣ ತಾತ್ಕಾಲಿಕವಾಗಿ ನಿರ್ಮಿಸಿದ ಸೇತುವೆಯ ಮೇಲೆ ನೀರು ಹರಿದು ರಸ್ತೆ ಸಂಪರ್ಕ ಇಲ್ಲದೆ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಬೇಕಾಗಿದೆ. ಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿದ್ದರೆ ತೊಂದರೆ ಆಗುತ್ತಿರಲಿಲ್ಲ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಸಾರ್ವಜನಿಕರು ಆಗ್ರಹರಿಸಿದ್ದಾರೆ .
ಹಗದೂರಿಗೆ ಹೋಗುವ ರಸ್ತೆಯೂ ಸಹ ನೀರು ತುಂಬಿ ಹರಿಯುತ್ತಿರುವುದರಿಂದ ಅಲ್ಲಿಯೂ ಸಹ ಸಂಪರ್ಕ ಇಲ್ಲದ ಪರಿಣಾಮ ಬೈಪಾಸ್ ರಸ್ತೆ ಮುಖಾಂತರ ತಮ್ಮ ತಮ್ಮ ಗ್ರಾಮಗಳಿಗೆ ಸಾರ್ವಜನಿಕರು ಹೋಗಬೇಕಾಗಿತ್ತು. ಸುಮಾರು ವರ್ಷಗಳ ನಂತರ ಭೀಮ ನದಿ ತುಂಬಿರುವ ಸುದ್ದಿಯನ್ನು ಕೇಳಿ ಹೆಚ್ಚಿನ ಸಾರ್ವಜನಿಕರು ಸ್ಥಳಕ್ಕೆ ಬಂದು ಹರಿಯುವ ನೀರನ್ನು ನೋಡುವುದಕ್ಕೆ ಸೇರಿದ್ದರು.
ಸುಮಾರು 35 ವರ್ಷಗಳ ನಂತರ ಹಲಗೂರು ಕೆರೆ ತುಂಬಿರುವುದು ಒಂದು ವಿಶೇಷ.