ಕನ್ನಡದ ಖ್ಯಾತ ಕತೆಗಾರ, ಕಾದಂಬರಿಕಾರ, ಹಳ್ಳ ಬಂತು ಹಳ್ಳ ಖ್ಯಾತಿಯ ಹಿರಿಯ ಲೇಖಕ ಶ್ರೀನಿವಾಸ ವೈದ್ಯ ಇಂದು ಮುಂಜಾನೆ ನಿಧನರಾದರು.
ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧ ಮುಂತಾದ ಪ್ರಕಾರಗಳಿಂದ ಒಮ್ಮೆಲೆ ಗಂಭೀರ ಸಾಹಿತ್ಯದೆಡೆಗೆ ಜೀಕಿಕೊಂಡ ಶ್ರೀನಿವಾಸ ವೈದ್ಯರು ಹುಟ್ಟಿದ್ದು ಏ. 4, 1936 ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ತಂದೆ ಬಿ.ಜಿ. ವೈದ್ಯ, ಸುಪ್ರಸಿದ್ಧ ವಕೀಲರು. ತಾಯಿ ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ ಸುಂದರಾಬಾಯಿ. ಪ್ರಾರಂಭಿಕ ಶಿಕ್ಷಣದಿಂದ ಹಿಡಿದು ಎಂ.ಎ.ವರೆಗೂ ಧಾರವಾಡದಲ್ಲೇ ಶಿಕ್ಷಣ ಪೂರ್ಣ ಗೊಳಿಸಿದರು. 1959ರಲ್ಲಿ ಅರ್ಥಶಾಸ್ತ್ರ-ರಾಜ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದ ಅವರು ಬ್ಯಾಂಕಿಂಗ್ ಪರೀಕ್ಷೆಯಾದ ಸಿ.ಎ.ಐ.ಐ.ಬಿ ಮತ್ತು ಭಾರತೀಯ ವಿದ್ಯಾಭವನದಿಂದ ಪಡೆದ ಪತ್ರಿಕೋದ್ಯಮ ಡಿಪ್ಲೊಮಾವನ್ನು ಪೂರೈಸಿದರು. ಮನೆಯಲ್ಲಿದ್ದುದು ಸಾಹಿತ್ಯಕ, ಸಾಂಸ್ಕೃತಿಕ ವಾತಾವರಣ. ಬಿಡುವಿನ ವೇಳೆಯಲ್ಲೆಲ್ಲಾ ಕೈಯಲ್ಲೊಂದು ಕಾದಂಬರಿ ಹಿಡಿದು ಸದಾ ಓದಿನಲ್ಲಿ ಮಗ್ನರಾಗಿರುತ್ತಿದ್ದ ತಾಯಿ. ಇದರಿಂದ ಪ್ರಭಾವಿತರಾದ ಶ್ರೀನಿವಾಸ ವೈದ್ಯರು ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿದ್ದಾಗಲೇ ಬರವಣಿಗೆಯ ಬಗ್ಗೆ ಆಸ್ಥೆ ಬೆಳೆಸಿಕೊಂಡಿದ್ದರು. ಆವೇಳೆಗಾಗಲೇ ಕೈಬರಹದ ಪತ್ರಿಕೆ ‘ನಂದಾದೀಪ’ವನ್ನು ಆರಂಭಿಸಿದ್ದರು. ಈ ಪತ್ರಿಕೆಗೆ ಸಹ ಸಂಪಾದಕರಾಗಿ ಮಹಾದೇವ ಬಣಕಾರರಿದ್ದರು. ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿಕೊಳ್ಳುತ್ತಿದ್ದ ವೈದ್ಯರು ಕಾಲೇಜು ದಿನಗಳಲ್ಲೇ ವಿ.ಕೃ.ಗೋಕಾಕರ ಪ್ರಭಾವಕ್ಕೆ ಒಳಗಾದವರು. ತಾವೂ ಅವರಂತೆ ಪ್ರೊ. ಆಗಬೇಕೆಂದು ಬಯಸಿದವರು. ಆದರೆ ಮನೆತನದ ವೈದ್ಯ ವೃತ್ತಿಗೂ ಸೇರದೆ, ತಂದೆಯ ವಕೀಲಿ ವೃತ್ತಿಯನ್ನೂ ಹಿಡಿಯದೆ ಸೇರಿದ್ದು ಮುಂಬಯಿಯ ಷಹರದಲ್ಲಿ ಪಿಎಚ್.ಡಿ. ಮಾಡಲು. 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿ ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿದ ಅವರು 1996ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದರು.
ಹಾಸ್ಯ ಲೇಖನಗಳ ಸಂಕಲನ ‘ತಲೆಗೊಂದು ತರತರ’ (1994) ಪ್ರಕಟವಾಯಿತು. ಎರಡನೆಯ, ಲಲಿತ ಪ್ರಬಂಧಗಳ ಸಂಕಲನ ‘ಮನಸುಖರಾಯನ ಮನಸು’, ಮೂರನೆಯ ಹಾಸ್ಯ ಪ್ರಬಂಧಗಳ ಸಂಕಲನ ‘ರುಚಿಗೆ ಹುಳಿಯೊಗರು’. ಕಾದಂಬರಿ ‘ಹಳ್ಳ ಬಂತು ಹಳ್ಳ’. ಅಂಕಿತ ಪುಸ್ತಕ ಪ್ರಕಾಶನವು ಹೊರತಂದ ಸಣ್ಣ ಕತೆಗಳ ಸಂಕಲನ ‘ಅಗ್ನಿಕಾರ್ಯ’ (2007).
ಮನಸುಖರಾಯನ ಮನಸು ಕೃತಿಗೆ ಪರಮಾನಂದ ಪ್ರಶಸ್ತಿ (2003), ‘ಹಳ್ಳ ಬಂತು ಹಳ್ಳ’ ಕಾದಂಬರಿಗೆ ರಾಜ್ಯ ಸಾಹಿತ್ಯ ಅಕಾಡಮಿ ಬಹುಮಾನ (2004) ಮತ್ತು ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (2008), ರಾಜ್ಯೋತ್ಸವ ಪ್ರಶಸ್ತಿ (2010) ಪುರಸ್ಕೃತರಾದ್ದಾರೆ.