ಅಣ್ಣಿಗೇರಿ: ಪಟ್ಟಣದ ದಿ.ಎಸ್.ಎಂ. ಪಾಟೀಲ ಸಭಾಭವನದ ಆವರಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್. ಕೋನರಡ್ಡಿ ಹಮ್ಮಿಕೊಂಡ ಬಹಿರಂಗ ಚುನಾವಣಾ ಪ್ರಚಾರ ಸಭೆಗೆ ಆಗಮಿಸಿದ್ದ ನಲವಡಿ ಗ್ರಾಮದ ಮುಖಂಡ ದೇವನಗೌಡ ವೆಂ ಪಾಟೀಲ(52) ಹೃದಯಾಘಾತದಿಂದ ಮೃತಪಟ್ಟ ಧಾರುಣ ಘಟನೆ ಸಂಭವಿಸಿದೆ.
ಕಾಂಗ್ರೆಸ್ ಪಕ್ಷದಿಂದ ಆಯೋಜಿಸಿದ್ದ ಈ ಸಭೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹಾಗೂ ಸಂಸದ ರಣದೀಪಸಿಂಗ್ ಸುರ್ಜೇವಾಲಾ ಹಾಗೂ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ ನಲಪಾಡ ಉಪಸ್ಥಿತಿಯಲ್ಲಿ ಈ ಬಹಿರಂಗ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ನಾಮಪತ್ರ ಸಲ್ಲಿಸಿದ ನಂತರ ಪಟ್ಟಣದಲ್ಲಿ ಇದೇ ಮೊದಲ ಬಹಿರಂಗ ಪ್ರಚಾರವನ್ನು ಹಮ್ಮಿಕೊಂಡಿರುವುದು ವಿಶೇಷವಾಗಿತ್ತು. ದುರದೃಷ್ಟವಶಾತ್ ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಸಭೆಯಲ್ಲಿ ಇಂತಹ ದುರ್ಘಟನೆ ಸಂಭವಿಸಿರುವುದು ಬಹಳ ನೋವಿನ ಸಂಗತಿಯಾಗಿದೆ. ಕಳೆದ ೨೦೧೮ರ ಚುನಾವಣೆಯಲ್ಲಿಯೂ ಸಹ ಅಂದಿನ ಕಾಂಗ್ರೆಸ್ ಅಭ್ಯರ್ಥಿ ವಿನೋದ ಅಸೂಟಿ ಪರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ವ್ಹಿ.ಮಾಡಳ್ಳಿ ಪ್ರಚಾರಕ್ಕಾಗಿ ಆಗಮಿಸಿದಾಗ ಶಲವಡಿ ಗ್ರಾಮದಲ್ಲಿ ಘಟನೆಯೊಂದು ಸಂಭವಿಸಿ ಮೃತಪಟ್ಟ ವರದಿಯಾಗಿತ್ತು.
ಇಂದು ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ಇಂತಹ ಘಟನೆ ಸಂಭವಿಸಿದ್ದರಿಂದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕಾರ್ಯಕ್ರಮ ರದ್ದುಗೊಳಿಸಿದರು.