ಬಿ.ಎಲ್. ಸಂತೋಷ ಕಾರಣಕ್ಕೆ ಟಿಕೆಟ್ ತಪ್ಪಿದ್ದು

ಜಗದೀಶ ಶೆಟ್ಟರ್‌
Advertisement

ಹುಬ್ಬಳ್ಳಿ: ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರ್ಪಡೆಯಾಗಲು ಮೂಲ ಕಾರಣ ಬಿ.ಎಲ್. ಸಂತೋಷ ಅವರು. ತಮ್ಮ ಮಾನಸ ಪುತ್ರ ಮಹೇಶ ಟೆಂಗಿನಕಾಯಿ ಅವರ ಸಲುವಾಗಿ ಶೆಟ್ಟರ್ ಅವರನ್ನು ಹೊರ ಹಾಕಿದ್ದಾರೆ ಎಂದು ಮಾಜಿ ಸಿಎಂ, ಕಾಂಗ್ರೆಸ್ ಮುಖಂಡ ಜಗದೀಶ ಶೆಟ್ಟರ್ ಭಾವುಕರಾಗಿ ಹೇಳಿದರು.
ಮಂಗಳವಾರ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಮ್ಮ ಪ್ರೀತಿಯ, ಮಮತೆಯ, ಮಾನಸ ಪುತ್ರ ಟೆಂಗಿನಕಾಯಿ ಅವರಿಗೆ ಟಿಕೆಟ್ ಕೊಡಿಸಲು ಬಿ.ಎಲ್. ಸಂತೋಷ ಆಟವಾಡಿದ್ದಾರೆ. ಅವರು ಬಿಜೆಪಿ ನಾಶ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ವ್ಯಕ್ತಿ ನಿಷ್ಠೆ ಇಲ್ಲ, ಪಕ್ಷ ನಿಷ್ಠೆ ಅಂತಾರೆ ಆದರೆ ಈಗ ಬಿ.ಎಲ್. ಸಂತೋಷ ಅವರ ಅಭಿಪ್ರಾಯದಿಂದ ಮುಂಚೂಣಿಯಲ್ಲಿದ್ದ ನನ್ನ ಹೆಸರು ಬಿಟ್ಟು ಸಣ್ಣ ಹುಡುಗರ ತರ ಟಿಕೆಟ್ ಇಲ್ಲ ಎಂದು ಹೊರ ಹಾಕಿದರು.
ಇದಕ್ಕಾಗಿ ಕಳೆದ ಆರು ತಿಂಗಳಿಂದ ಕ್ಷೇತ್ರದಲ್ಲಿ ಶೆಟ್ಟರ್ ಅವರಿಗೆ ಟಿಕೆಟ್ ಇಲ್ಲ ಎಂದು ಸುದ್ದಿ ಹಬ್ಬಿಸಿದ್ದಾರೆ. ಇದನ್ನೆಲ್ಲ ವರಿಷ್ಠರ ಗಮನಕ್ಕೆ ತರಲಾಗಿದೆ. ಕೇವಲ ಆರು ತಿಂಗಳು ಶಾಸಕನಾಗಬೇಕು ಎಂದು ಕೇಳಿದ್ದೇನೆ. ಆದರೆ ಇದ್ಯಾವುದಕ್ಕು ಮಹತ್ವ ಕೊಡದೆ ಕಟ್ಟಿ ಬೆಳೆಸುದ ಪಕ್ಷದಿಂದ ಹೊರ ಹಾಕಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕೇಂದ್ರ ಸಚಿವರು ನನ್ನ ಪರವಾಗಿ ಪ್ರಯತ್ನ ಮಾಡಿದ್ದೇವೆ ಎಂದು ಹೇಳುತ್ತಾರೆ ಆದರೆ ಗಟ್ಟಿ ಧ್ವನಿ ಎತ್ತಲಿಲ್ಲ ಏಕೆ ಎಂದು ಪ್ರಶ್ನಿಸಿದರು.
ಜೋಶಿ ಅವರು ಸ್ವಲ್ಪ ಹಳೆಯದನ್ನ ನೆನಪು ಮಾಡಿಕೊಳ್ಳಲಿ ಅವರ ಲೋಕಸಭಾ ಚುನಾವಣೆಯಲ್ಲಿ ಅವರ ಗೆಲುವಿಗಾಗಿ ಹೆಚ್ಚು ಕೆಲಸ ಮಾಡಿದ್ದೇವೆ ಎಂದರು. ಬಿಜೆಪಿ ಪಕ್ಷ ಕೆಲವೇ ಕೆಲವರ ಕಪಿಮುಷ್ಠಿಯಲ್ಲಿದೆ.‌ ಕಳೆದ ಎರಡ್ಮೂರು ವರ್ಷದಲ್ಲಿ ಪಕ್ಷದಲ್ಲಿ ನನ್ನನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ರಾಜ್ಯ ಕಾರ್ಯಕಾರಣಿಯಲ್ಲಿ ಐದು‌ ನಿಮಿಷ ಮಾತನಾಡಲು ಅವಕಾಶ ನೀಡಲಿಲ್ಲ. ಒಂದೇ ಒಂದು ಚುನಾವಣೆ ಗೆಲ್ಲದ ವ್ಯಕ್ತಿ ಅಣ್ಣಾಮಲೈ ಅವರನ್ನು ರಾಜ್ಯ ಚುನಾವಣೆ ಉಪ ಉಸ್ತುವಾರಿ ಮಾಡಿದ್ದಾರೆ. ಅವರ ಹಿಂದೆ ನಾವು ಕೈ ಕಟ್ಟಿ ಕೂರಬೇಕು. ಶೆಟ್ಟರ್ ಅವರಿಗೆ ಯಾವುದೇ ಕಾರಣ ಇಲ್ಲದೆ ಟಿಕೆಟ್ ತಪ್ಪಿಸಿದ್ದು ನೋವು ತಂದಿದೆ.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ್ ಕಟೀಲ್ ಅವರ ಆಡಿಯೋ ವೈರಲ್ ಆದಂತೆ ಶೆಟ್ಟರ್ , ಈಶ್ವರಪ್ಪ ಬಿಎಸ್ ವೈ ಮೂಲೆಗುಂಪು ಇಂದು ನಿಜವಾಗಿದೆ ಎಂದರು. ರಾಜ್ಯದಲ್ಲಿ ಎಲ್ಲ ಕಡೆ ಬಿ.ಎಲ್ . ಸಂತೋಷ ತಮ್ಮ ಆಪ್ತರಿಗೆ ಟಿಕೆಟ್ ಕೊಡಿಸದ್ದಾರೆ. ಗೆಲ್ಲುವಂತಹ ಅಭ್ಯರ್ಥಿ ರಾಮದಾಸ್ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಬಿಜೆಪಿಯಲ್ಲಿ ಹಿರಿಯರಿಗೆ ಗೌರವ ಹಾಗೂ ಅನುಭವಕ್ಕೆ ಬೆಲೆ ಇಲ್ಲದಾಗಿದೆ. ಯಾವುದೇ ಷರತ್ ಇಲ್ಲದೆ ಆತ್ಮಗೌರವಕ್ಕೆ ಕಾಂಗ್ರೆಸ್ ಸೇರಿದ್ದೆನೆ. ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪಕ್ಷ ಹೇಳಿದಂತೆ ಕಾರ್ಯ ಮಾಡಲಿದ್ದೇನೆ. ಶೆಟ್ಟರ್ ಲಿಂಗಾಯತ ನಾಯಕರು ಹೌದೋ ಅಲ್ಲವೇ ಎಂಬುದನ್ನ ಜನ ತೀರ್ಮಾನ ಮಾಡುತ್ತಾರೆ. ಈ ಬಗ್ಗೆ ತಮ್ಮ ಕ್ಷೇತ್ರ ಬಿಟ್ಟು ಬೇರೆ ಕಡೆ ಹೋಗದವರು ನನ್ನ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದಾರೆ. ಅವರೆ ಪ್ರಶ್ನೆ ಮಾಡಿಕೊಳ್ಳಲಿ ಎಂದರು.