ಬೆಳಗಾವಿ: ವ್ಯಕ್ತಿಗತವಾಗಿ ನನಗೆ ಅನ್ಯಾಯವಾಗಿದ್ದರೂ ಕೂಡ ಅದನ್ನೆಲ್ಲಾ ಮರೆತು ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಶ್ರಮಿಸುವುದಾಗಿ ಶಾಸಕ ಅನಿಲ ಬೆನಕೆ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ಮೂಲಕ ಕಳೆದ ನಾಲ್ಕು ದಿನಗಳಿಂದ ಎದ್ದಿದ್ದ ಪಕ್ಷಾಂತರ ಸುದ್ದಿಗೆ ಖುದ್ದು ಶಾಸಕ ಅನಿಲ ಬೆನಕೆ ತೆರೆ ಎಳೆದರು.
ನಾನು ಪಕ್ಷದ ಶಿಸ್ತಿನ ಸಿಪಾಯಿ. ಬಿಜೆಪಿ ಯಾವ ಕಾರಣದಿಂದ ನನಗೆ ಟಿಕೆಟ್ ನಿರಾಕರಿಸಿತು ಎನ್ನುವುದು ಗೊತ್ತಿಲ್ಲ. ಆದರೆ ಪಕ್ಷದ ಹಿರಿಯರ ಸೂಚನೆಯಂತೆ ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲರ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು. ಬಿಜೆಪಿಯ ಹೈಕಮಾಂಡ್ ಈ ಕ್ಷೇತ್ರದಲ್ಲಿ ಬದಲಾವಣೆ ಮಾಡಿ ಡಾ. ರವಿ ಪಾಟೀಲ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದೆ. ಎಲ್ಲರೂ ಚರ್ಚೆ ನಡೆಸಿ ಡಾ. ರವಿ ಪಾಟೀಲ ಗೆಲ್ಲಿಸಬೇಕೆಂದು ತೀರ್ಮಾನ ಮಾಡಲಾಗಿದೆ ಎಂದರು.
ನನ್ನ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಅನಿಲ್ ಬೆನಕೆ ಅಭ್ಯರ್ಥಿ ಎಂದುಕೊಂಡು ಡಾ. ರವಿ ಪಾಟೀಲ ಗೆಲುವಿಗೆ ಶ್ರಮಿಸಬೇಕು ಎಂದು ಅವರು ಮನವಿ ಮಾಡಿಕೊಂಡರು. ಕಳೆದ ನಾಲ್ಕು ದಿನಗಳಿಂದ ಅನಿಲ್ ಬೆನಕೆ ಅವರು ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿ ನಡೆಸುತ್ತಾರೆ ಎನ್ನುವ ಸುದ್ದಿಗಳಿದ್ದವು. ಆದರೆ ಅದೆಲ್ಲವೂ ಸುಳ್ಳು ಎಂದರು.
ಕಳೆದ 30 ವರ್ಷಗಳಿಂದ ಬಿಜೆಪಿ ಸಾಧ್ಯವಾಗಿರಲಿಲ್ಲ. ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರಲಿಲ್ಲ. 2018ರಲ್ಲಿ ಬಿಜೆಪಿ ನನ್ನನ್ನು ಅಭ್ಯರ್ಥಿಯಾಗಿ ಘೋಷಿಸಿತು. ಜಾತಿ ಬೇಧ ಮರೆತು ಬೆಳಗಾವಿ ಜನ ಗೆಲ್ಲಿಸಿದರು ಎಂದರು.
ನಾನು ಬಿಜೆಪಿ ಜೊತೆಗಿದ್ದೇನೆ, ಹಿರಿಯ ನಾಯಕರು ನನ್ನ ಜೊತೆಗಿದ್ದಾರೆ. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಪುನರುಚ್ಚರಿಸಿದರು,
ಬಿ.ಎಲ್ .ಸಂತೋಷ್ ಲೋಕಸಭೆ ಟಿಕೆಟ್ ನೀಡುವ ಭರವಸೆ ನೀಡಿದ್ದಾರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯರನ್ನು ಭೇಟಿಯಾಗಿದ್ದೇನೆ, ಕಾರ್ಯಕರ್ತರಾಗಿ ಪಕ್ಷಕ್ಕಾಗಿ ದುಡಿಯಿರಿ ಎಂದಿದ್ದಾರೆಂದರು. ಜಾತಿ ವಿಚಾರವಾಗಿ ನಿಮಗೆ ಟಿಕೆಟ್ ಕೈ ತಪ್ಪಿತೆ ಎನ್ನುವಪ್ರಶ್ನೆಗೆ ಉತ್ತರಿಸಿದ ಅವರು, ಹಾಗೇನಿಲ್ಲ, ಎಲ್ಲಾ ಸಾಧಕ ಬಾಧಕ ವಿಚಾರಿಸಿಯೇ ನಿರ್ಧರಿಸಿದ್ದಾರೆ. ಪಕ್ಷ ತಗೆದುಕೊಂಡ ನಿರ್ಧಾರಕ್ಕೆ ಬದ್ಧ ಎಂದರು, ಬಿಜೆಪಿ ರಾಜ್ಯ ವಕ್ತಾರ ಎಂ.ಬಿ. ಝಿರಲಿ ಮಾತನಾಡಿ, ಪಕ್ಷ ತೊರೆದ ನಾಯಕರಿಗೆ ಕಾರ್ಯಕರ್ತರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.
ಮಹಾರಾಷ್ಟ್ರದ ಬಿಜೆಪಿ ನಾಯಕ ಗಿರೀಶ್ ಮಹಾಜನ್ ಚುನಾವಣಾ ಉಸ್ತುವಾರಿಯಾಗಿ ಇಲ್ಲಿಗೆ ಆಗಮಿಸಿದ್ದು, ಬಿಜೆಪಿ ಮಹಾನಗರ ಅಧ್ಯಕ್ಷ ಅನಿಲ್ ಬೆನಕೆ ಹಾಗೂ ಹಿರಿಯ ನಾಯಕರ ಮಾರ್ಗದರ್ಶನದಂತೆ ಚುನಾವಣೆ ಎದುರಿಸುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸಲಿದ್ದೇವೆ ಎಂದರು.
ಶಾಸಕ ಅಭಯ ಪಾಟೀಲ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ. ಬೆಳಗಾವಿ ತಾಲೂಕಿನ ಬೆಳಗಾವಿ ಉತ್ತರ, ದಕ್ಷಿಣ ಹಾಗೂ ಗ್ರಾಮಾಂತರ ಮೂರು ಕ್ಷೇತ್ರಗಳಲ್ಲಿ ಕಾರ್ಯಕರ್ತರ ಬಲದಿಂದ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂಸದೆ ಮಂಗಲಾ ಅಂಗಡಿ, ಬಿಜೆಪಿ ಅಭ್ಯರ್ಥಿ ಡಾ. ರವಿ ಪಾಟೀಲ ಮತ್ತಿತರರಿದ್ದರು.