ಶೆಟ್ಟರ ಸಾಮರ್ಥ್ಯ ಅಲ್ಲ ಗಳೆಯಲ್ಲ

cm
Advertisement

ಹುಬ್ಬಳ್ಳಿ : ಜಗದೀಶ ಶೆಟ್ಟರ ಅವರು ಪ್ರಭಾವಿ ನಾಯಕರು. ಅದನ್ನು ನಾನು ಅಲ್ಲ ಗಳೆಯುವುದಿಲ್ಲ. ಪಕ್ಷಕ್ಕೆ ರಾಜೀನಾಮೆ ಕೊಟ್ಟಿರುವುದು ನನಗೂ ವೈಯಕ್ತಿಕವಾಗಿ ಖೇದ ಎನಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಆದರ್ಶನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ ಅವರು ಪಕ್ಷದಲ್ಲಿಯೇ ಉಳಿದಿದ್ದರೆ ಇನ್ನೂ ದೊಡ್ಡಮಟ್ಟದ ಸ್ಥಾನಮಾನಗಳು ಅವರಿಗೆ ಲಭಿಸುತ್ತಿದ್ದವು. ನಾನೇ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿ ಶೆಟ್ಟರ ಅವರೊಂದಿಗೆ ಮಾತನಾಡಿಸಿದ್ದೆ. ಆದರೆ, ಅವರು ಯಾವುದಕ್ಕೂ ಒಪ್ಪಲಿಲ್ಲ ಎಂದರು.

ಶೆಟ್ಟರ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳಲು ಏನೆಲ್ಲ ಪ್ರಯತ್ನ ಮಾಡಬೇಕೊ ಅದನ್ನೆಲ್ಲವನ್ನೂ ಮಾಡಿದ್ದೇನೆ. ಪಕ್ಷದ ವರಿಷ್ಠರು, ಚುನಾವಣಾ ಸಮಿತಿಯು ಏನು ತೀರ್ಮಾನ ಮಾಡುತ್ತಾರೊ ಆ ಪ್ರಕಾರ ನಡೆದುಕೊಳ್ಳಬೇಕಾಗುತ್ತದೆ.ಹಿರಿಯ ತಲೆಮಾರಿನ ನಾಯಕರು ಸ್ಥಾನಗಳನ್ನು ಬಿಟ್ಟುಕೊಡಬೇಕು. ಎರಡನೇ ತಲೆಮಾರಿನವರಿಗೆ ಅವಕಾಶಗಳು ಲಭಿಸಬೇಕು. ಅಧಿಕಾರ ಕೇಂದ್ರಿಕೃತವಾಗಿರಬಾರದು ಎಂಬ ಕೆಲ ತೀರ್ಮಾನಗಳನ್ನು ಮಾಡಿದೆ. ಆ ಮಾನದಂಡಗಳಡಿ ಶೆಟ್ಟರ ಅವರಿಗೆ ಟಿಕೆಟ್ ಲಭಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.
ಜಗದೀಶ ಶೆಟ್ಟರ ಪಕ್ಷ ತೊರೆದಿದ್ದಾರೆ. ಆದರೆ, ಪಕ್ಷದಲ್ಲಿ ಲಿಂಗಾಯತ ಸಮಾಜದ ನಾಯಕರು ಹಲವರು ಇದ್ದಾರೆ. ಯಡಿಯೂರಪ್ಪ, ಶೆಟ್ಟರ ಒಂದನೇ ತಲೆಮಾರಿನ ನಾಯಕರಾಗಿದ್ದರು. ಈಗ ಎರಡನೇ ತಲೆಮಾರಿನ ನಾಯಕರಾಗಿ ಮುರುಗೇಶ ನಿರಾಣಿ, ನಾನು, ಸಿಸಿ ಪಾಟೀಲ ಶಶಿಕಲಾ ಜೊಲ್ಲೆ, ಸೋಮಣ್ಣ ಹೀಗೆ ಅನೇಕರಿದ್ದೇವೆ ಎಂದರು.

ಡ್ಯಾಮೇಜ್ ಕಂಟ್ರೋಲ್ ಮಾಡ್ತೇವೆ
ಚುನಾವಣೆಯಂತೂ ಬಂದಿದೆ. ಸೆಂಟ್ರಲ್ ಕ್ಷೇತ್ರಕ್ಕೆ ಒಂದೆರಡು ದಿನಗಳಲ್ಲಿ ತೀರ್ಮಾನ ಮಾಡಿ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಈ ಕ್ಷೇತ್ರದಲ್ಲಿ ಶೆಟ್ಟರ ಪ್ರಭಾವಿಗಳು ಎಂಬುದು ಗೊತ್ತಿದೆ. ಆದರೆ, ನಮ್ಮ ಪಕ್ಷ ಸಂಘಟನಾತ್ಮಕವಾಗಿ ಗಟ್ಟಿಯಾಗಿದೆ. ಡ್ಯಾಮೇಜ್ ಕಂಟ್ರೋಲ್ ಗೆ ಏನೇನು ಮಾಡಬೇಕೊ ಅದನ್ನೆಲ್ಲಾ ಮಾಡುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್ ಗೆ ಶೆಟ್ಟರ ತೆರಳುತ್ತಿರುವುದು ಬೇಸರ ತರಿಸಿದೆ. ಜಗದೀಶ ಶೆಟ್ಟರ ಅವರು ನಮಗೆಲ್ಲ ರಾಜಕೀಯ ಪಾಠ ಮಾಡಿದರು. ಬಿಜೆಪಿ ಪಕ್ಷದ ಶಿಸ್ತನ್ನು ಹೇಳಿಕೊಟ್ಟಿದ್ದ ನಾಯಕರು. ಅವರು ಕಾಂಗ್ರೆಸ್ ಸೇರ್ಪಡೆ ತೀರ್ಮಾನ ಮಾಡಿರುವುದು ಬೇಸರ ತರಿಸಿದೆ ಎಂದು ಸಿಎಂ ನುಡಿದರು.