ತವಣಪ್ಪ ಅಷ್ಟಗಿ ಪಕ್ಷೇತರನಾಗಿ ಸ್ಪರ್ಧೆ ಬಹುತೇಕ ಖಚಿತ

Advertisement

ಉಪ್ಪಿನ ಬೇಟಗೇರಿ(ಧಾರವಾಡ): ಧಾರವಾಡ 71 ಕ್ಷೇತ್ರದ ಬಿ.ಜೆ.ಪಿ ಟಿಕೆಟ್ ವಂಚಿತರಾಗಿರುವ ಮಾಜಿ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಬಹುತೇಕ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ.

ಬುಧವಾರವಷ್ಟೇ ತವಣಪ್ಪ ಅಷ್ಟಗಿ ಅವರು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ಶುಕ್ರವಾರ ರಾತ್ರಿ ತಮ್ಮ ಒಡೆತನದ ಶ್ರೀ ಪದ್ಮಾವತಿ ಕಾಟನ್ ಮಿಲ್ ನಲ್ಲಿ ನಡೆದ ತಮ್ಮ ಅಪಾರ ಬೆಂಬಲಿಗರ ಸಭೆಯಲ್ಲಿ ಈ ಅಭಿಪ್ರಾಯ ಹೊರಹೊಮ್ಮಿದೆ.

ಇನ್ನೆರಡು ದಿನದಲ್ಲಿ ಮತ್ತೊಮ್ಮೆ ಕ್ಷೇತ್ರದ 52 ಹಳ್ಳಿಗಳ ಜನರ ಅಭಿಪ್ರಾಯ ತಿಳಿದುಕೊಂಡು ನಾನು ಅಥವಾ ಬಸವರಾಜ ಕೊರವರ ಇಬ್ಬರಲ್ಲಿ ಒಬ್ಬರು ಪಕ್ಷೇತರರಾಗಿ ಸ್ಪರ್ಧಿಸುವುದು ನಿಶ್ಚಿತ. ನಾನು ಪಕ್ಷೇತರನಾಗಿ ಸ್ಪರ್ಧೆಸಿದರೆ ಬಸವರಾಜ ಕೊರವರು ಅವರು ನನಗೆ ಬೆಂಬಲ ಕೊಡುತ್ತಾರೆ. ಬಸವರಾಜ ಕೊರವರ ಅವರು ಸ್ಪರ್ಧೆಸಿದರೆ ಅವರಿಗೆ ನಾನು ಬೆಂಬಲ ಕೊಡುತ್ತೇನೆ. ನಮ್ಮ ಮತದಾರರು ಏನು ಹೇಳುತ್ತಾರೋ ಅದರಂತೆ ಇನ್ನೆರಡು ದಿನದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಮ್ಮ ಅಪಾರ ಬೆಂಬಲಿಗರ ಸಭೆಯಲ್ಲಿ ಅವರು ಘೋಷಣೆ ಮಾಡಿದ್ದಾರೆ.

ಕ್ಷೇತ್ರದ ಸುಮಾರು 3 ಸಾವಿರಕ್ಕಿಂತಲೂ ಹೆಚ್ಚಿನ ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಬಸವರಾಜ ಕೊರವರ, ದತ್ತಾ ಡೋರ್ಲೆ, ಶೇಖಯ್ಯ ಮಠಪತಿ, ಲಲಿತ ಭಂಡಾರಿ, ಚಂದ್ರಗೌಡ ಭೂಮನಗೌಡರ, ವೀರಣ್ಣಾ ಪರಾಂಡೆ, ಕಸ್ತೂರಿ ಅಷ್ಟಗಿ, ನಾಗರಾಜ ಕಿರಣಗಿ, ಶಿವಪ್ಪ ವಿಜಾಪುರ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು. ಒಟ್ಟಿನಲ್ಲಿ ಇಂದಿನ ಈ ಬೆಳವಣಿಗೆ ಧಾರವಾಡ 71 ಕ್ಷೇತ್ರದ ಚುನಾವಣಾ ಫಲಿತಾಂಶ ದ ದಿಕ್ಕನ್ನೇ ಬದಲಿಸಲಿದೆ ಎಂದು ವ್ಯಾಖ್ಯಾನಿಸಲಾಗಿದೆ.