ನಾಮಪತ್ರ ಸಲ್ಲಿಕೆಗೆ ಎರಡು ದಿನ ಇದ್ದಾಗ ಈ ರೀತಿ ಹೇಳಿದ್ರೆ ಹೇಗೆ

ಶೆಟ್ಟರ್‌
Advertisement

ಹುಬ್ಬಳ್ಳಿ: ನಾಮಪತ್ರ ಸಲ್ಲಿಕೆ ದಿನ ಕೇವಲ ಎರಡು ದಿನ ಅಷ್ಟೇ ಬಾಕಿ ಇರುವಾಗ ಈ ರೀತಿ ಹೇಳಿದ್ದಾರೆ. ಇದರಿಂದ ಸಾಕಷ್ಟು ಬೇಸರವಾಗಿದೆ.
ಈ ರೀತಿಯ ಚಿಂತನೆ ಇದ್ದರೆ ಮೂರ್ನಾಲ್ಕು ತಿಂಗಳು ಮೊದಲೇ ಹೇಳಬಹುದಿತ್ತು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಚುನಾವಣೆಗೆ ಈಗಾಗಲೇ ಸಿದ್ಧವಾಗಿದ್ದೇನೆ. ಕ್ಷೇತ್ರದಲ್ಲಿ ಪ್ರಚಾರ ಸಭೆಗಳನ್ನೂ ಮಾಡಿದ್ದೇನೆ. ಯಾವುದೇ ಮುನ್ಸೂಚನೆ ಇಲ್ಲದೇ ಇದ್ದಕ್ಕಿದ್ದಂತೆ ಈ ರೀತಿ ನೀವು ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದಾರೆ.
ಒಂದು ವೇಳೆ, ಈ ರೀತಿ ಚಿಂತನೆ ಇದ್ದರೆ ಮೊದಲೇ ನನಗೆ ತಿಳಿಸಬಹುದಿತ್ತು. ನಾನೇನು ಈಚೆಗೆ ಪಕ್ಷಕ್ಕೆ ಬಂದವನಲ್ಲ. ಪಕ್ಷವನ್ನು ಕಟ್ಟಿ ಬೆಳಿಸಿದವ. ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ, ಪಕ್ಷದ ಅಧ್ಯಕ್ಷನಾಗಿ, ಸಚಿವನಾಗಿ ಕೆಲಸ ಮಾಡಿದ್ದೇನೆ. ಒಂದೇ ಒಂದು ಬಾರಿ ರಾಜಕೀಯ ಜೀವನದಲ್ಲಿ ಸೋಲು ಕಂಡಿಲ್ಲ. ಇಷ್ಟೆಲ್ಲ ಪಕ್ಷದ ವರಿಷ್ಠರಿಗೆ ಗೊತ್ತಿರುವ ವಿಚಾರವೇ. ಆದರೂ ಯಾವುದೇ ರೀತಿ ಮಾತುಕತೆ ನಡೆಸಿಲ್ಲ. ಚರ್ಚಿಸಿಲ್ಲ. ಏಕಾಏಕಿಯಾಗಿ ಈ ರೀತಿ ಸ್ಪರ್ಧೆ ಮಾಡುವುದು ಬೇಡ ಎಂದು ಹೇಳಿದ್ದಾರೆ ಎಂದರು.
ಜನಸಂಘ ಕಟ್ಟಿದವರಲ್ಲಿ ನಮ್ಮ ಚಿಕ್ಕಪ್ಪ, ನಮ್ಮ ಅಪ್ಪ ಅವರೂ ಇದ್ದಾರೆ. ನಾವು ಪಕ್ಷ ಸಂಘಟನೆ ಮಾಡಿದ್ದೇವೆ. ಎಲ್ಲವೂ ಗೊತ್ತಿರುವ ವಿಚಾರವೇ. ನೋಡೋಣ ನಾಳೆ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ. ಕಾದು ನೋಡುತ್ತೇನೆ ಎಂದು ಹೇಳಿದರು.
ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರು ಅಭ್ಯರ್ಥಿಗಳ ಆಯ್ಕೆ ಮಾಡುವ ಸಮಿತಿಯಲ್ಲಿ ಜಗದೀಶ ಶೆಟ್ಟರ ಅವರೂ ಒಬ್ಬರು. ಅವರಿಗೆ ಹೇಗೆ ಟಿಕೆಟ್ ನಿರಾಕರಣೆ ಮಾಡಲು ಸಾಧ್ಯ ಎಂದು ಹೇಳಿದ್ದರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಗದೀಶ ಶೆಟ್ಟರ, ಈ ಪ್ರಶ್ನೆಗೆ ಅರುಣಸಿಂಗ್ ಅವರೇ ಉತ್ತರಿಸಬೇಕಾಗುತ್ತದೆ ಎಂದರು.