ಚಂಡೀಗಢ: ಓಯೋ ರೂಮ್ಸ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರ ತಂದೆ ರಮೇಶ್ ಅಗರವಾಲ್ ಅವರು ಹರ್ಯಾಣದ ಗುರುಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ಗಗನಚುಂಬಿ ಕಟ್ಟಡದಿಂದ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುಗ್ರಾಮದ ಸೆಕ್ಟರ್ 54ರಲ್ಲಿರುವ ಡಿಎಲ್ಎಫ್ನ ದಿ ಕ್ರೆಸ್ಟ್ ಸೊಸೈಟಿಯ 20ನೇ ಮಹಡಿಯಿಂದ ವ್ಯಕ್ತಿಯೊಬ್ಬರು ಕೆಳಗೆ ಬಿದ್ದಿದ್ದಾರೆ ಎಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ಡಿಎಲ್ಎಫ್ ಭದ್ರತಾ ಸಿಬ್ಬಂದಿ ಪೊಲೀಸರಿಗೆ ತಿಳಿಸಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆಂದು ವೈದ್ಯರು ದೃಢಪಡಿಸಿದ್ದಾರೆ. ಪೊಲೀಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತ್ತು. ಘಟನಾ ಸ್ಥಳದಲ್ಲಿ ಪರಿಶೀಲನೆ ವೇಳೆ, ಕಟ್ಟಡದ ಮೇಲಿನಿಂದ ಬಿದ್ದ ವ್ಯಕ್ತಿ ರಮೇಶ್ ಪ್ರಸಾದ್ ಅಗರ್ವಾಲ್ ಎಂದು ತಿಳಿದುಬಂದಿದೆ. ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ರಮೇಶ್ ಅಗರವಾಲ್ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಿತೇಶ್ ಅಗರ್ವಾಲ್, ನನಗೆ ನನ್ನ ತಂದೆಯೇ ಮಾರ್ಗದರ್ಶಕರು. ಅವರೇ ನನ್ನ ಶಕ್ತಿ. ಅವರಿಂದು ನಮ್ಮಿಂದ ದೂರವಾಗಿದ್ದಾರೆ. ಅರ್ಥಪೂರ್ಣ ಜೀವನ ನಡೆಸಿದ ಅವರು ನನಗೆ ಪ್ರತಿದಿನ ಸ್ಫೂರ್ತಿಯಾಗಿದ್ದರು. ಅವರ ಪ್ರತಿಯೊಂದು ಮಾತುಗಳು ನನ್ನ ಹೃದಯದಲ್ಲಿ ಆಳವಾಗಿ ಬೇರೂರಿದೆ. ಈ ದುಃಖದ ಸಮಯದಲ್ಲಿ ನನ್ನ ಖಾಸಗಿ ತನವನ್ನೂ ಗೌರವಿಸುವಂತೆ ಎಲ್ಲರಿಗೂ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ತಿಳಿಸಿದ್ದಾರೆ.