ಚನ್ನೇಶಪುರದ ಮಾಡಾಳು ನಿವಾಸಕ್ಕೂ: ಲೋಕಾಯುಕ್ತ ಪೊಲೀಸರು ದಾಳಿ

Advertisement

ದಾವಣಗೆರೆ: ಕೆಎಸ್‌ಡಿಎಲ್‌ನ ಟೆಂಡರ್ ನೀಡಲು ಬರೋಬ್ಬರಿ ೪೦ ಲಕ್ಷ ರೂ., ಲಂಚ ಪಡೆಯುವ ವೇಳೆ ಚನ್ನಗಿರಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳು ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಸ್ವಗ್ರಾಮದವಾದ ಚನ್ನೇಶಪುರದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಮಹತ್ವದ ದಾಖಲೆ ಕಲೆ ಹಾಕುತ್ತಿದ್ದಾರೆ.
ಲೋಕಾಯುಕ್ತ ಎಸ್‌ಪಿ. ಎಂ.ಎಸ್. ಕೌಲಲಾಂಪುರಿ ನೇತೃತ್ವದಲ್ಲಿನ ಅಧಿಕಾರಿಗಳ ತಂಡ ಮಧ್ಯಾಹ್ನ ೧೨ ಗಂಟೆಗೆ ಮಾಡಾಳು ನಿವಾಸಕ್ಕೆ ದೌಡಾಯಿಸಿರುವ ತಂಡ ಮನೆಯಲ್ಲೆಲ್ಲಾ ಅಗತ್ಯ ದಾಖಲೆ, ಹಣ, ಚಿನ್ನ, ಆಸ್ತಿ ಮಾಹಿತಿಯ ಬಗ್ಗೆ ಪರಿಶೀಲನೆ ನಡೆಸುತ್ತಿದೆ. ಗುರುವಾರವೇ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತವರ ಇನ್ನೋರ್ವ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಬೆಂಗಳೂರಿಗೆ ತೆರಳಿರುವ ಹಿನ್ನೆಲೆಯಲ್ಲಿ ಲೋಕಾಯುಕ್ತ ಪರಿಶೀಲನೆ ವೇಳೆ ಮಾಡಾಳು ಪತ್ನಿ, ಸೊಸೆ ಮತ್ತು ಮೊಮ್ಮಕ್ಕಳು ಹಾಗೂ ಸಂಬಂಧಿಕರು ಮಾತ್ರ ಉಪಸ್ಥಿತರಿದ್ದರು.
ಬಿಜೆಪಿ ಸರ್ಕಾರ ಹಗರಣಗಳ ಸರಮಾಲೆಯನ್ನೇ ಸೃಷ್ಟಿಸುತ್ತಿದೆ. ಭ್ರಷ್ಟ ಬಿಜೆಪಿ ಸರ್ಕಾರವನ್ನು ಕೂಡಲೇ ಕಿತ್ತೆಸೆಯುವಂತೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಪದಾಧಿಕಾರಿ ಮುಖಂಡರು ಹಾಗೂ ಕಾರ್ಯಕರ್ತರು ಚನ್ನಗಿರಿ ಮತ್ತು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿ, ಪೇ ಎಂಎಎಲ್‌ಎ ಎಂಬ ಕ್ಯೂಆರ್ ಕೋಡ್ ಸುಟ್ಟು ಪ್ರತಿಭಟನೆ ನಡೆಸಿದರೆ, ಮಾಡಾಳು ವಿರೂಪಾಕ್ಷಪ್ಪ ಅವರ ಬೆಂಬಲಿಗರು ಮಾಡಾಳು ಅವರಿಗೆ ಟಿಕೇಟ್ ತಪ್ಪಿಸಲು ಷಡ್ಯಂತ್ರ ಮಾಡಲಾಗಿದೆ ಎಂದು ಮಾಡಾಳು ಪರವಾಗಿ ಪ್ರತಿಭಟಿಸಿದರು.
ಬೆಂಗಳೂರಿನ ಜಲಮಂಡಳಿಯಲ್ಲಿ ಮುಖ್ಯ ಲೆಕ್ಕಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಮಾಡಾಳು ತಮ್ಮ ತಂದೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ನಿರ್ವಹಿಸುತ್ತಿರುವ ಕೆಎಸ್‌ಡಿಎಲ್‌ನಲ್ಲಿ ಗುತ್ತಿಗೆದಾರರಿಗೆ ೮೦ ಲಕ್ಷ ರೂ., ಬೇಡಿಕೆ ಇಟ್ಟಿದ್ದು, ಮುಂಗಡವಾಗಿ ೪೦ ಲಕ್ಷ ರೂ., ಪಡೆಯುವ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದರು, ಕಚೇರಿಯಲ್ಲಿ ಶೋಧ ಕಾರ್ಯ ನಡೆಸಿದಾಗ ೪೦ ಲಕ್ಷ ಹೊರತು ಪಡಿಸಿ ೧.೬೨ ಕೋಟಿ ರೂ., ಹಣ ಸಿಕ್ಕಿದ್ದು, ಅವರ ನಿವಾಸದಲ್ಲಿ ೬ ಕೋಟಿಗೂ ಅಧಿಕ ಹಣ ವಶಕ್ಕೆ ಪಡೆಯಲಾಗಿದೆ. ಅವರ ಒಡೆತನದ ಮನೆಯೇ ೯೦ ಕೋಟಿ ರೂ., ಬೆಲೆ ಬಾಳುತ್ತದೆಂದು ಅಂದಾಜಿಸಲಾಗಿದೆ. ಒಟ್ಟಾರೆ ಮನೆಯ ಮೌಲ್ಯವೂ ಸೇರಿದಂತೆ ೧೨೦ ಕೋಟಿ ರೂ., ಆಸ್ತಿ, ಹಣ, ೫ ಕೆಜಿ. ಚಿನ್ನ, ೧೦ ಕೆಜಿ ಬೆಳ್ಳಿ ಆಭರಣಗಳು ಲೋಕಾಯುಕ್ತ ಪೊಲೀಸರ ವಶಕ್ಕೆ ಸಿಕ್ಕಿರುವುದಾಗಿ ಮೂಲಗಳಿಂದ ತಿಳಿದು ಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತವರ ಇನ್ನೋರ್ವ ಪುತ್ರ ಮಾಡಾಳು ಮಲ್ಲಿಕಾರ್ಜುನ್ ಗುರುವಾರ ರಾತ್ರಿಯೇ ಬೆಂಗಳೂರಿಗೆ ದೌಡಾಯಿಸಿ, ಮಾಡಾಳು ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.