ಅಪಹರಣ ಪ್ರಕರಣ

Advertisement

ನಮ್ಮ ಸ್ನಾತಕೋತ್ತರ ಡಿಪ್ಲೋಮಾ ಪಠ್ಯಕ್ರಮಕ್ಕೆ ಸೇರಿಕೊಂಡ ಹತ್ತು ಜನರಲ್ಲಿ ಯೋಗೇಶ ಒಬ್ಬ. ಆತ ಮೂಲತ: ಬರೋಡಾದವನು. ಆತ ಆಗಲೇ ಬಿ.ಎಡ್ ಮಾಡಿ ಆರೆಂಟು ವರ್ಷ ಶಿಕ್ಷಕ ವೃತ್ತಿ ಮಾಡಿದವನು. ಅವನಿಗೆ ಮದುವೆಯಾಗಿ ಮಗ ಕೂಡ ಇದ್ದ. ಯೋಗೇಶ್ ಗುಜರಾತಿನಲ್ಲಿ ಪ್ರಸಿದ್ಧವಾಗಿರುವ ಸ್ವಾಮಿನಾರಾಯಣ ಪರಂಪರೆಗೆ ಸೇರಿದವನು. ಅಲ್ಲಿಯ ಹಿರಿಯ ಸ್ವಾಮಿಗಳು ಹೇಳಿದರೆಂದು ಈ ಕೋರ್ಸಿಗೆ ಸೇರಿಕೊಂಡಿದ್ದ. ಅವನಿಗೆ ಇದರಲ್ಲಿ ಆಸಕ್ತಿ ಇಲ್ಲ. ಹೆಂಡತಿ, ಮಗನನ್ನು ಬಿಟ್ಟು, ಇಲ್ಲಿಗೆ ಬಂದು ಒಂದು ವರ್ಷ ಕಳೆಯುವುದು ಅವನಿಗೆ ಬೇಡವಾಗಿತ್ತು. ತರಗತಿಯ ಉದ್ಘಾಟನೆಯ ಸಮಯಕ್ಕೇ ಅವನು ತನ್ನ ಸರಂಜಾಮುಸಹಿತ ಕಾಲೇಜಿಗೆ ಬಂದು, “ಸರ್, ನನಗೆ ಇದನ್ನು ಮಾಡಲು ಇಚ್ಛೆ ಇಲ್ಲ. ಮರಳಿ ಬರೋಡಾಕ್ಕೆ ಹೋಗಲು ಅನುಮತಿ ಕೊಡಿ” ಎಂದು ಕೇಳಿದ. ನಾನು, “ಮೊದಲು ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸು. ಆಮೇಲೆ ಹೋಗುವುದಿದ್ದರೆ ಹೋಗು” ಎಂದೆ. ಅವನು ಕಾರ್ಯಕ್ರಮದಲ್ಲಿ ಭಾಗವಹಿಸಿದ. ಅದೇನು ಆಸಕ್ತಿ ಬಂತೋ, ಉಳಿದುಬಿಟ್ಟ.
ನಮ್ಮ ಸಂಸ್ಥೆಯ ಈ ಕೋರ್ಸ ಒಂದು ಅದ್ಭುತ ಪ್ರಪಂಚವನ್ನೇ ಹುಟ್ಟು ಹಾಕಿತ್ತು. ಕಾಲೇಜು ಒಂದು ಸದಾ ಚಟುವಟಿಕೆಗಳ ಗೂಡು. ಯಾರಿಗೂ ಒಂದು ನಿಮಿಷವೂ ಪುರುಸೊತ್ತಿಲ್ಲ. ಪ್ರತಿದಿನ ವಿದ್ಯಾರ್ಥಿಗಳ ಮಂಡನೆಗಳು (Presentations), ಸೆಮಿನಾರ್‌ಗಳು, ಪ್ರದರ್ಶನಗಳು ನಡೆಯುತ್ತಿದ್ದವು. ಭಾನುವಾರ ಕೂಡ ನಮ್ಮ ಕಾಲೇಜು ಪೂರ್ತಿ ದಿನ ಕೆಲಸ ಮಾಡುತ್ತಿತ್ತು. ಕಂಪ್ಯೂಟರ್ ಪ್ರಯೋಗಶಾಲೆಯಂತೂ ಕೇಂದ್ರಬಿಂದುವಾಗಿತ್ತು. ಉನ್ನತ ಶಿಕ್ಷಣ ಹಾಗಿರಬೇಕು ಎಂದು ತೋರುವಂತಿತ್ತು. ಉನ್ನತ ಶಿಕ್ಷಣದಲ್ಲಿ ಕಲಿಸುವುದಕ್ಕಿಂತ ಕಲಿಯುವುದು ಹೆಚ್ಚಾಗಬೇಕು ಎಂದು ನಂಬಿದ್ದವನು ನಾನು. ಎಷ್ಟೋ ಬಾರಿ ನನಗೆ ಜನ ಕೇಳಿದ್ದುಂಟು, “ನೀವು ಭಾರತದಲ್ಲಿ ಮತ್ತು ಪಾಶ್ಚಿಮಾತ್ಯ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಪಾಠ ಮಾಡಿದ್ದೀರಿ. ಅವುಗಳಲ್ಲಿ ವ್ಯತ್ಯಾಸ ಏನು?” ನನ್ನ ಉತ್ತರ ಸರಳ, “ನಾವು ಭಾರತದಲ್ಲಿ ಮಕ್ಕಳಿಗೆ ಕಲಿಸುತ್ತೇವೆ ಅದರೆ ಪಾಶ್ಚಿಮಾತ್ಯ ದೇಶಗಳಲ್ಲಿ ಮಕ್ಕಳು ತಾವೇ ಕಲಿಯುತ್ತಾರೆ”, ಎಲ್ಲಿಯವರೆಗೆ ಕಲಿಕೆಗೆ ವಿದ್ಯಾರ್ಥಿ ಸ್ವತ: ಪರಿಶ್ರಮ ಹಾಕುವುದಿಲ್ಲವೊ, ಬರೀ ಶಿಕ್ಷಕರು ನೀಡಿದ ನೋಟ್ಸ್ಗಳ ಮೇಲೆ ಅವಲಂಬಿತವಾಗಿರುತ್ತಾನೋ ಅಲ್ಲಿಯವರೆಗೆ ಜ್ಞಾನ ಮಸ್ತಕದಲ್ಲಿ ಇಳಿಯುವುದಿಲ್ಲ.
ತರಗತಿಗಳು ಪ್ರಾರಂಭವಾಗಿ ನಾಲ್ಕೈದು ತಿಂಗಳುಗಳಾಗಿರಬಹುದು. ಒಂದು ದಿನ ರಾತ್ರಿ ಸುಮಾರು ಒಂಭತ್ತು ಗಂಟೆಗೆ ನನಗೊಂದು ಮೊಬೈಲ್ ಸಂದೇಶ ಬಂದಿತು. “Yogesh is my custody wait for my call at 10 PM” “ಯೋಗೇಶ್ ನನ್ನ ಸೆರೆಯಲ್ಲಿದ್ದಾನೆ. ನನ್ನ ಕರೆಗಾಗಿ ಹತ್ತು ಗಂಟೆಗೆ ಕಾಯಿರಿ”. ನನಗೆ ಅರ್ಥವೇ ಆಗಲಿಲ್ಲ. ಎಲ್ಲಿಗೆ ಹೋದ ಯೋಗೇಶ್? ಯಾರ ಸೆರೆಯಲ್ಲಿದ್ದಾನೆ? ಏನಾದರೂ ಮಾಡುವುದಕ್ಕೆ ಹೋಗಿ ಪೋಲೀಸ್ ಏನಾದರೂ ಅರೆಸ್ಟ್ ಮಾಡಿದ್ದಾರಾ? ತಲೆ ಬಿಸಿಯಾಯಿತು. ಅವನು ಬಾಡಿಗೆಗೆ ಇದ್ದ ಮನೆ ಯಜಮಾನರಿಗೆ ಫೋನ್ ಮಾಡಿದೆ. ಯೋಗೇಶ್ ಕಾಲೇಜಿನಿಂದ ಮನೆಗೆ ಬಂದೇ ಇಲ್ಲ ಎಂದರವರು. ಯೋಗೇಶ್‌ನ ತರಗತಿಯ ಸ್ನೇಹಿತರಿಗೆ ಫೋನ್ ಮಾಡಿದೆ. ಒಬ್ಬ ಹುಡುಗ ಹೇಳಿದ, “ಸರ್, ತರಗತಿಗಳು ಮುಗಿದ ಮೇಲೆ ಇಬ್ಬರು ಹುಡುಗಿಯರು ಹಾಸ್ಟೆಲ್‌ಗೆ ಹೊರಟಿದ್ದರು. ಅವರನ್ನ ಹಾಸ್ಟೆಲ್‌ವರೆಗೆ ಬಿಟ್ಟುಬರಲು ಆತ ಹೋಗಿದ್ದ. ಆಮೇಲೆ ಅವನನ್ನು ನೋಡಿಲ್ಲ. ಆತ ಮನೆಗೆ ಹೋಗಿರಬೇಕು”. ಹಾಸ್ಟೆಲ್‌ನ ಒಬ್ಬ ಹುಡುಗಿಗೆ ಫೋನ್ ಮಾಡಿದೆ. ಆಕೆ, “ಸರ್, ಯೋಗೇಶ್ ನಮ್ಮನ್ನು ಬಿಟ್ಟು ಹೊರಟ. ನಾನು ಗೇಟ್ ಬಳಿಯೇ ನಿಂತಿದ್ದೆ. ಆಗ ಯಾರೋ ಆಟೋದಲ್ಲಿ ಬಂದು ಅವನನ್ನು ಯಾವುದೋ ಅಡ್ರೆಸ್ ಕೇಳಿದರು. ಆತ ನಂತರ ಅದೇ ಆಟೋ ಹತ್ತಿ ಹೋದ. ಬಹುಶ: ಅವನಿಗೆ ಪರಿಚಯದವರಿರಬೇಕು” ಎಂದಳು. ನನಗೆ ಚಿಂತೆಯಾಯಿತು. ಯೋಗೇಶನಿಗೆ ಇಲ್ಲಿ ಯಾರೂ ಪರಿಚಯದವರಿಲ್ಲ. ಯಾರ ಜೊತೆಯಲ್ಲಿ ಈತ ಹೋದ? ಯೋಗೇಶ್‌ನ ನಂಬರಿಗೆ ಫೋನ್ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು.
ಆ ಹೊತ್ತಿಗೆ ನನಗೊಂದು ಫೋನ್ ಬಂತು. ಆಗ ಸರಿಯಾಗಿ ಹತ್ತು ಗಂಟೆ. ಆ ಕಡೆಯಿಂದ ಗೊಗ್ಗರು ಧ್ವನಿಯ ಸಿಡುಕು ಮಾತು. “ರೀ ಡೈರೆಕ್ಟರ, ನಿಮ್ಮ ವಿದ್ಯಾರ್ಥಿ ನನ್ನ ಸುಪರ್ದಿಯಲ್ಲಿದ್ದಾನೆ. ಮಾತನಾಡಿ ಅವನೊಡನೆ” ಎಂದ ಆ ವ್ಯಕ್ತಿ. ಆ ಕಡೆಯಿಂದ ಯೋಗೇಶ್‌ನ ಅಳು ದನಿ ಕೇಳಿಸಿತು. “ಸರ್, ಇವರು ನನ್ನನ್ನು ಕೊಂದು ಬಿಡ್ತಾರೆ. ಹೇಗಾದರೂ ಮಾಡಿ ಬಿಡಿಸಿಕೊಳ್ಳಿ ಸರ್” ಎಂದು ಬಿಕ್ಕಿದ. ತಕ್ಷಣ ಮತ್ತೆ ಗೊಗ್ಗರು ಧ್ವನಿ, “ಮುಂದಿನ ಕರೆ ಹನ್ನೊಂದು ಗಂಟೆಗೆ”. ಫೋನ್ ಸಂಪರ್ಕ ಕಡಿಯಿತು. ಇದೊಳ್ಳೆ ಪತ್ತೇದಾರಿ ಸಿನಿಮಾ ಇದ್ದ ಹಾಗೆ ಆಯ್ತಲ್ಲ ಎನ್ನಿಸಿದರೂ ಯೋಗೇಶ್‌ನ ಬಗ್ಗೆ ಚಿಂತೆಯಾಯಿತು. ಎಲ್ಲ ಬಿಟ್ಟು ಇವನನ್ನೇಕೆ ಹಿಡಿದುಕೊಂಡು ಹೋದರು? ಅವರು ಯಾರು? ಅವರಿಗೆ ಏನು ಬೇಕು? ಎಲ್ಲವೂ ಗೋಜಲು ಗೋಜಲಾಗಿತ್ತು. ನಾನು ತಕ್ಷಣವೇ ಕಾರ್ಯಮಾಡಬೇಕಿತ್ತು. ನನಗೆ ಫೋನ್ ಬಂದಿತ್ತಲ್ಲ, ಆ ನಂಬರನ್ನು ನನಗೆ ಅತ್ಯಂತ ಬೇಕಾಗಿದ್ದ ಹಿರಿಯ ಪೋಲೀಸ್ ಅಧಿಕಾರಿಗೆ ಕಳುಹಿಸಿ, ಅದನ್ನು ಪತ್ತೆ ಮಾಡಬಹುದೇ ಎಂದು ಕೇಳಿದೆ. ಅವರು ತಮ್ಮ ಗೂಢಚರ್ಯೆ ಇಲಾಖೆಗೆ ಅದನ್ನು ಕಳುಹಿಸಿದರು. ಹತ್ತು ನಿಮಿಷದಲ್ಲೇ ಉತ್ತರ ಬಂತು. “ಅಪಹರಣಕಾರರು ಬುದ್ಧಿವಂತರಿದ್ದಾರೆ. ಆ ಫೋನ್ ಮಾಡಿದ ತಕ್ಷಣ ಸಿಮ್ ಕಾರ್ಡ್ ತೆಗೆದು ಬಿಟ್ಟಿದ್ದಾರೆ. ಅದೀಗ ಕಾರ್ಯಮಾಡುವುದಿಲ್ಲ. ಮುಂದಿನ ಕರೆ ಅದೇ ಫೋನ್‌ನಿಂದ ಬರುತ್ತದೆಯೇ ಎಂಬುದನ್ನು ಪರೀಕ್ಷಿಸಿ ಹೇಳಿ”. ಸರಿಯಾಗಿ ರಾತ್ರಿ ಹನ್ನೊಂದಕ್ಕೆ ಮತ್ತೆ ಫೋನ್ ಬಂತು. ಈ ಬಾರಿ ಬೇರೆ ನಂಬರು. ಅದೇ ಗೊಗ್ಗರು ಧ್ವನಿ. “ಇದುವರೆಗೂ ಯೋಗೇಶ್‌ನ ಪ್ರಾಣ ತೆಗೆದಿಲ್ಲ. ಆದರೆ ಹೆಚ್ಚು ಸಮಯವಿಲ್ಲ. ನೀವು ತೀರ್ಮಾನ ಮಾಡದಿದ್ದರೆ ಅವನ ಪ್ರಾಣ ಹೋಗುವುದು ಮಾತ್ರವಲ್ಲ, ನಿಮ್ಮ ಹೆಂಡತಿ, ಮಕ್ಕಳ ಪ್ರಾಣವೂ ಉಳಿಯಲಾರದು. ಈಗ ನಿಮ್ಮ ಮನೆಯ ಹತ್ತಿರವೇ ನಮ್ಮ ಹುಡುಗರಿದ್ದಾರೆ”. ನಾನು ತಾಳ್ಮೆಯಿಂದ ಹೇಳಿದೆ, “ನಾನು ಏನು ತೀರ್ಮಾನ ಮಾಡುವುದು? ನಿಮಗೆ ಬೇಕಾದದ್ದು ಏನು? ಅದನ್ನು ಹೇಳಿ. ಅದು ನನ್ನಿಂದ ಆಗುವುದಿದ್ದರೆ ಮಾಡುತ್ತೇನೆ”. ಹಿಂದೆ ಯೋಗೇಶ್ ನರಳುವ ಧ್ವನಿ ಕೇಳುತ್ತಿತ್ತು. ಬಹುಶ: ಅವರು ಆತನಿಗೆ ಹೊಡೆದಿರಬಹುದು ಎನ್ನಿಸಿತು. ಮತ್ತೆ ಆ ವ್ಯಕ್ತಿ ಹೇಳಿದ, “ನಾಳೆ ಬೆಳಿಗ್ಗೆ ಅರುಣಾಳನ್ನು ಕರೆದುಕೊಂಡು ನಾನು ತಿಳಿಸಿದ ಅಡ್ರೆಸ್ಸಿಗೆ ಬರಬೇಕು. ಎಂಟು ಗಂಟೆಯ ಒಳಗೆ ಆಕೆ ಅಲ್ಲಿಗೆ ಬರದಿದ್ದರೆ ಯೋಗೇಶ್‌ನ ಹೆಣ ಅದೇ ಜಾಗೆಯಲ್ಲಿರುತ್ತದೆ. ಬಂದು ತೆಗೆದುಕೊಂಡು ಹೋಗಿ”. ಫೋನ್ ಕಡಿಯಿತು.
ಇದೇನು ಸಂಬಂಧ! ಅರುಣಾ ನಮ್ಮ ಕಂಪ್ಯೂಟರ್ ಪ್ರಯೋಗಶಾಲೆಯ ಶಿಕ್ಷಕಿ. ಹಿಂದೆ ಆಕೆ ನನ್ನ ವಿದ್ಯಾರ್ಥಿಯಾಗಿದ್ದವಳು. ಆಕೆಗೆ ನನ್ನ ಮೇಲೆ ವಿಪರೀತ ಗೌರವ. ಆದರೆ ಯೋಗೇಶ್‌ನನ್ನು ಬಿಡಲು ಅರುಣಾಳನ್ನು ಏಕೆ ಕಳುಹಿಸಬೇಕು ತಿಳಿಯಲಿಲ್ಲ. ನನ್ನ ಸಹೋದ್ಯೋಗಿಗೆ ಫೋನ್ ಮಾಡಿ, ಅರುಣಾಳ ಸಮಸ್ಯೆ ಏನಾದರೂ ಇದೆಯಾ ಎಂದು ಕೇಳಿದೆ. ಆಕೆ ಹೇಳಿದರು, “ಸರ್, ಅದೊಂದು ದೊಡ್ಡ ಸಮಸ್ಯೆ. ಆಕೆಯದು ಪ್ರೇಮವಿವಾಹ. ಆಕೆಯ ಗಂಡ ಕಾಶ್ಮೀರದವನು. ಅವನೊಂದು ತರಹದ ಸ್ಯಾಡಿಸ್ಟ್ ಮತ್ತು ಟೆರರಿಸ್ಟ್ ಇದ್ದ ಹಾಗೆ. ಆಕೆಯನ್ನು ತುಂಬ ಹೊಡೆಯುತ್ತಾನೆ. ಹೋದ ತಿಂಗಳು ಆಕೆಯ ಹೊಟ್ಟೆಗೆ ಚಾಕೂ ಹಾಕಿದ್ದ. ತನ್ನ ಮಗಳನ್ನು ವಿಪರೀತ ಹೊಡೆಯುತ್ತಾನೆ. ಅದನ್ನು ತಡೆಯಲಾರದೆ ಅರುಣಾ ಒಂದು ವಾರದಿಂದ ಗಂಡನ ಮನೆ ಬಿಟ್ಟು ತಂದೆಯ ಮನೆಗೆ ಹೋಗಿಬಿಟ್ಟಿದ್ದಾಳೆ. ಆಕೆಯನ್ನು ಮತ್ತೆ ತನ್ನ ಮನೆಗೆ ಕರೆದುಕೊಂಡು ಹೋಗಲು ಅವಳನ್ನು, ಅವರ ಮನೆಯವರನ್ನು ತುಂಬ ಹೆದರಿಸುತ್ತಾನೆ”. ಚಿತ್ರ ಕೊಂಚ ಸ್ಪಷ್ಟವಾಗತೊಡಗಿತು. ಅರುಣಾಳನ್ನು ಪಡೆಯಲು ಯೋಗೇಶ್‌ನ ಅಪಹರಣ. ಆದರೆ ಯೋಗೇಶ್ ಯಾಕೆ? ಇದರಲ್ಲಿ ನನ್ನ ಪಾತ್ರವೇನು? ಮತ್ತೆ ಫೋನ್ ಬಂತು. ಮತ್ತೆ ಬೇರೆ ನಂಬರು! ಸಮಯ ರಾತ್ರಿ ಹನ್ನೆರಡು ಗಂಟೆ. ಅದೇ ಗೊಗ್ಗರು ಧ್ವನಿ, “ನಾನು ಹೇಳಿದ್ದು ತಿಳಿಯಿತೇ? ಬೆಳಿಗ್ಗೆ ಎಂಟು ಗಂಟೆಗೆ ಅರುಣಾ ಬರದಿದ್ದರೆ ಯೋಗೇಶ್ ಖಲಾಸ್”. ನಾನು ಹೇಳಿದೆ, “ಯೋಗೇಶ್‌ಗೆ ಫೋನ್ ಕೊಡಿ, ನಾನು ಮಾತನಾಡಬೇಕು”. ಅವನಿಗೆ ಫೋನ್ ಕೊಟ್ಟ. ನಾನು ಯೋಗೇಶ್‌ಗೆ ಹೇಳಿದೆ. “ನೀನು ಒಂದೊಂದೇ ಶಬ್ಧ ಮಾತನಾಡು ವಿವರ ಹೇಳಬೇಡ. ನಿನ್ನನ್ನು ಅಪಹರಣ ಮಾಡಿದವರ ಬಳಿ ಆಯುಧಗಳು ಇವೆಯೇ?” “ಹೌದು”. “ನಾಲ್ಕು ಜನರಿದ್ದಾರೆಯೇ? “ಇಲ್ಲ”, “ಮೂರು?” “ಇಲ್ಲ”. “ಇಬ್ಬರು?” “ಹೌದು”. “ನೀನಿರುವ ಜಾಗೆ ಯಾವುದು ಎಂದು ಗೊತ್ತಿದೆಯೇ?” “ಇಲ್ಲ”. ಗೊಗ್ಗರು ಧ್ವನಿಯ ಮಾಲಿಕ ಫೋನ್ ಕಿತ್ತಿಕೊಂಡ, “ಏನು ಹೌದು, ಇಲ್ಲ?” ನಿಮ್ಮ ತೀರ್ಮಾನ ಹೇಳಿ” ಎಂದ. ನಾನು ನಿಧಾನವಾಗಿ ಮಾತನಾಡಿದೆ, “ಅಪ್ಪಾ, ನೀನು ಯಾರು ಎಂಬುದು ನನಗೆ ಗೊತ್ತಿದೆ. ನಿನ್ನ ಫೋನ್ ರೆಕಾರ್ಡ ಆಗುವುದು ಮಾತ್ರವಲ್ಲ, ಪೋಲೀಸ್‌ರಿಂದ‌ ಟ್ರ್ಯಾಕ್ ಆಗುತ್ತಿದೆ ನೀವುಎಲ್ಲಿದ್ದೀರಿ ಎಂಬುದೂ ತಿಳಿದಿದೆ. ನಿನ್ನ ಹೆಂಡತಿಯನ್ನು ಮನೆಗೆ ಕರೆಸಿಕೊಳ್ಳಲು ನಾನು ಯಾಕೆ ಬೇಕು? ನಿನ್ನ ಮೇಲೆ ಪ್ರೀತಿ ಇದ್ದರೆ ಆಕೆಯೇ ಬರುತ್ತಾಳೆ” ಎಂದಾಗ ಆತ ಕೂಗಿದ, “ಆಕೆ ನೀವು ಹೇಳಿದಂತೆ ಮಾತ್ರ ಕೇಳುತ್ತಾಳೆ. ನೀವೇ ಆಕೆಯನ್ನು ಕರೆತರಬೇಕು. ಈ ಕ್ಷಣ ನಾನು ಜಾಗೆ ಬದಲಾಯಿಸುತ್ತೇನೆ. ಎಂಟು ಗಂಟೆಗೆ ಅರುಣಾ ಹೇಳಿದ ಸ್ಥಳಕ್ಕೆ ಬರದಿದ್ದರೆ, ಇವರ ಹೆಣ ಸಿಗುತ್ತದೆ” ಫೋನ್ ಕಡಿಯಿತು. ಈಗ ನಿಜವಾಗಿಯೂ ತಲೆ ಬಿಸಿಯಾಯಿತು. ಫೋನ್ ರೆಕಾರ್ಡ್ ಆಗುತ್ತಿದೆ ಎಂದು ನಾನು ಸುಮ್ಮನೆ ಹೆದರಿಸಿದ್ದೆ. ಇದರ ಪರಿಣಾಮವೇನಾಗುತ್ತದೋ ಎಂದು ಭಯವಾಯಿತು.


(ಮುಂದುವರೆಯುತ್ತದೆ)