ರಾಜಕೀಯ ವೈಷಮ್ಯ: ಕೈ ಮುಖಂಡನ ಮೇಲೆ ಹಲ್ಲೆ

ರಾಜಕೀಯ
Advertisement

ಮೋಳೆ: ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ವೈಷಮ್ಯದ ಘಟನೆಯೊಂದು ನಡೆದಿದ್ದು, ಅಥಣಿ ಹಾಗೂ ಕಾಗವಾಡ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಮುಖಂಡರೊಬ್ಬರ ಮೇಲೆ ಕೆಲ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದು, ಇಡೀ ರಾಜಕೀಯ ವಲಯದಲ್ಲಿ ತಲ್ಲಣ ಮೂಡಿಸಿದೆ.
ಕಾಗವಾಡ ಬ್ಲಾಕ್ ಯೂಥ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಅಪರಾಜ ಅವರೇ ದುಷ್ಕರ್ಮಿಗಳ ದಾಳಿಯಿಂದ ಹಲ್ಲೆಗೊಳಗಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಮೇಲೆ ಹಿಂಬಾಲಿಸಿಕೊಂಡು ಬಂದಿದ್ದ ಆರೋಪಿಗಳು, ಸಂಜೆ ಹೊತ್ತಿನಲ್ಲಿಯೇ ಪ್ರಶಾಂತ ಅವರ ಬೈಕ್ ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ, ಹೊಟ್ಟೆ, ಕೈ, ಬೆನ್ನಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಘಟನೆ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಐನಾಪುರದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.