ಕಲಬುರಗಿ-ಬೀದರ್ ಮಧ್ಯೆ ಮತ್ತೊಂದು ರೈಲು

Advertisement

ಕಲಬುರಗಿ-ಬೀದರ್ ಜನರಿಗೆ ರೈಲ್ವೆ ಇಲಾಖೆ ಸಿಹಿಸುದ್ದಿಯೊಂದನ್ನು ನೀಡಿದೆ. ಉಭಯ ಜಿಲ್ಲೆಗಳ ನಡುವೆ ಮತ್ತೊಂದು ರೈಲು ಓಡಿಸಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದ್ದು, ಈ ಮೂಲಕ ಈ ಭಾಗದ ಜನರ ಬಹುಕಾಲದ ಬೇಡಿಕೆಗೆ ಹಸಿರು ನಿಶಾನೆ ತೋರಿಸಿದೆ. ಒಂದೇ ಡೆಮು ರೈಲು ಇದ್ದು, ನಿತ್ಯ ಎರಡು ಬಾರಿ ಸಂಚರಿಸುತ್ತದೆ. ಹೊಸದಾಗಿ ಆರಂಭವಾಗುವ ಡೆಮು ರೈಲು ನಿತ್ಯ ಬೆಳಿಗ್ಗೆ 7.30ಕ್ಕೆ ಕಲಬುರಗಿಯಿಂದ ಹೊರಟು ಬೆಳಿಗ್ಗೆ 10.15ಕ್ಕೆ ಬೀದರ್‌ ತಲುಪುತ್ತದೆ. 10.30ಕ್ಕೆ ಬೀದರ್‌ನಿಂದ ಹೊರಟು ಮಧ್ಯಾಹ್ನ 1.20ಕ್ಕೆ ಕಲಬುರಗಿಗೆ ಮರಳುವುದು. 1.30ಕ್ಕೆ ಇಲ್ಲಿಂದ ಹೊರಟು ಸಂಜೆ 4.45ಕ್ಕೆ ಬೀದರ್ ತಲುಪಲಿದೆ. 5ಕ್ಕೆ ಬೀದರ್‌ನಿಂದ ಹೊರಟು ಸಂಜೆ 7.40ಕ್ಕೆ ಕಲಬುರಗಿಗೆ ಮರಳಲಿದೆ. ಕಲಬುರಗಿ ಬಿಜೆಪಿಯ ಸಂಸದ ಡಾ. ಉಮೇಶ್ ಜಾಧವ್ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಈ ಹಿಂದೆ ಪತ್ರ ಬರೆದು ಕಲಬುರಗಿ-ಬೀದರ್ ನಡುವೆ ಮತ್ತೊಂದು ರೈಲು ಸಂಚಾರ ಆರಂಭಿಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿದುಬಂದಿದೆ. ಈ ಕುರಿತು ಅಶ್ವಿನಿ ವೈಷ್ಣವ್ ಡಾ. ಉಮೇಶ್‌ ಜಾಧವ್‌ಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆನ್ನಲಾಗಿದೆ.