ಬಾಗಲಕೋಟೆ: ಜಿಲ್ಲೆಯ ತೇರದಾಳ ಶಾಸಕ ಸಿದ್ದು ಸವದಿ ರಾಜಕೀಯ ದುರ್ಬಳಕೆಯಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಹತ್ತಿಕ್ಕುವ ತಂತ್ರಗಾರಿಕೆ ನಡೆಯದು. ವಿನಾಕಾರಣ ಹಳಿಂಗಳಿ ಗ್ರಾಮಸ್ಥರ ಮೇಲೆ ಪ್ರಕರಣ ದಾಖಲು ಮಾಡಿಸಿ ಜಾತಿ ನಿಂದನೆ ಪ್ರಕರಣಕ್ಕೆ ದಲಿತರನ್ನು ದುರಪಯೋಗಪಡಿಸಿಕೊಂಡು ಕಾನೂನು ಗಾಳಿಗೆ ತೂರುವ ನಡೆ ಶಾಸಕರದ್ದಾಗಿದ್ದು, ಈ ರೀತಿ ಕಿರುಕುಳವುಂಟಾದರೆ ಇಡೀ ತೇರದಾಳ ಮತಕ್ಷೇತ್ರವೇ ಹೊತ್ತಿ ಉರಿಯಲಿದೆ ಎಂದು ಮಾಜಿ ಸಚಿವೆ ಉಮಾಶ್ರೀ ಹರಿಹಾಯ್ದರು.
ಶನಿವಾರ ತೇರದಾಳದಿಂದ ಬನಹಟ್ಟಿಯವರೆಗೆ ಸುಮಾರು 10 ಕಿ.ಮೀ.ನಷ್ಟು ಪಾದಯಾತ್ರೆ ಮೂಲಕ ಶಾಸಕ ಸಿದ್ದು ಸವದಿಯವರ ಅಕ್ರಮ ಆಸ್ತಿ ತನಿಖೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯ ನಂತರ ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕ್ಷೇತ್ರವಷ್ಟೇ ಅಲ್ಲದೆ ಧಾರವಾಡ, ಬೆಳಗಾವಿ, ರಾಮದುರ್ಗ ಹೀಗೆ ಎಲ್ಲೆಡೆ 150 ಕ್ಕೂ ಅಧಿಕ ಎಕರೆಯಷ್ಟು ಅಕ್ರಮ ಆಸ್ತಿ ಮಾಡಿರುವ ಶಾಸಕ ಸವದಿ. ಇದರ ವಿರುದ್ದ ಕಾನೂನು ಸಮರ ನಡೆಸಿದರೆ ಅಂಥವರ ವಿರುದ್ಧ ಸುಳ್ಳು ಪ್ರಕರಣದಿಂದ ಬೆದರಿಕೆ ಕುತಂತ್ರ ನಡೆಸುತ್ತಿದ್ದಾರೆ.
ಕಾಂಗ್ರೆಸ್ನ ಶಕ್ತಿಯಾಗಿರುವ ರಾಜು ದೇಸಾಯಿ(ನಂದೆಪ್ಪನವರ) ಕಾನೂನು ಹೋರಾಟ ನಡೆಸುತ್ತಿದ್ದಾರೆ. ಮಿಸ್ಟರ್ ಸಿದ್ದು ಸವದಿ ಪ್ರತಿಯೊಬ್ಬ ಪ್ರಜೆಗೂ ಜನಪ್ರತಿನಿಧಿಯಾದವರು ತಪ್ಪು ಮಾಡಿದಾಗ ಕೇಳುವ ಹಕ್ಕು ಇದೆ. ಹಕ್ಕುಚ್ಯುತಿ ಮಾಡುವ ದುರುದ್ದೇಶ ನಡೆಯದು ಎಂದು ಖಡಕ್ಕ್ಕಾಗಿ ಹೇಳಿದರು.
ಕಾಂಗ್ರೆಸ್ ರಾಜು ದೇಸಾಯಿ ಮಾತನಾಡಿ, ಸರ್ಕಾರಿ ಅಧಿಕಾರಿಗಳ ಮೇಲೆ ದಬ್ಬಾಳಿಕೆ ನಡೆಸುತ್ತ ಗುತ್ತಿಗೆದಾರರ ಬಿಲ್ ಬಾಕಿಯಿಂದ ಜೀವನವೇ ಅತಂತ್ರವಾಗಿಸುವಲ್ಲಿ ಶಾಸಕ ಸವದಿ ಕಾರಣರಾಗಿದ್ದು, ಇಡೀ ಕ್ಷೇತ್ರದಲ್ಲಿ ಸಂಬಂಧಿಕರ ಗುತ್ತಿಗೆದಾರರೇ ಇದ್ದು, ಇದರಲ್ಲಿನ ಸಿಂಹಪಾಲು ಶಾಸಕರಿಗೆ ತಲುಪುತ್ತಿದೆ. ಇದರಿಂದ ಕಳಪೆ ಕಾಮಗಾರಿ ನಡೆಸಲು ಶಾಸಕರೇ ಕುಮ್ಮಕ್ಕು ನೀಡುತ್ತಿದ್ದು, ಅಂದಾಜು ಪತ್ರದಂತೆ ಕಾಮಗಾರಿಗಳಾಗಿದ್ದರೆ ರಾಜಕೀಯ ನಿವೃತ್ತಿಯಾಗುವೆಂದರು. ಲೋಕಾಯುಕ್ತಕ್ಕೆ ಅಕ್ರಮ ಆಸ್ತಿ ಬಗ್ಗೆದೂರು ನೀಡಿದ್ದೇನೆ. ಇದರಿಂದ ವೈರತ್ವದ ರಾಜಕಾರಣ ನಡೆಸುತ್ತಿರುವ ಸವದಿಯವರಿಗೆ ಮುಂದಿನ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದರು.
ಶಾಸಕ ಸವದಿಯವರ ಭ್ರಷ್ಟಾಚಾರಕ್ಕೆ ಸ್ವಪಕ್ಷದ ಮುಖಂಡರಿಂದಲೇ ಮಾಹಿತಿಯಿದ್ದು, ತಕ್ಷಣವೇ ಬಂಧಿಸದಿದ್ದಲ್ಲಿ ದೇಶಬಿಟ್ಟು ತೆರಳಲಿದ್ದಾರೆಂದು ಹೇಳಿರುವದೇ ಸಾಕ್ಷಿಯೆಂದು ಕಾಂಗ್ರೆಸ್ ಮುಖಂಡ ಡಾ. ಪದ್ಮಜಿತ ನಾಡಗೌಡ ಪಾಟೀಲ ಹೇಳಿದರು. ಸಚಿವ ಅಶ್ವಥ್ ನಾರಾಯಣ ರಾಜಕಾರಣ ಹೋಗಲಿ ವೈದ್ಯರಾಗಿಯೇ ಸೇವೆಯಿಲ್ಲ. ಬರೀ ಉಗ್ರಗಾಮಿಗಳಂತೆ ಹೇಳಿಕೆ ನೀಡುತ್ತ ಕಳಂಕ ವ್ಯಕ್ತಿಯಾಗಿರುವದು ಸೋಜಿಗದ ಸಂಗತಿಯೆಂದರು. ಇದೇ ಸಂದರ್ಭ ಶಂಕರ ಸೊರಗಾಂವಿ, ಶ್ರೀಶೈಲ ದಳವಾಯಿ, ಸಿದ್ದು ಕೊಣ್ಣೂರ, ಡಾ. ಎ.ಆರ್. ಬೆಳಗಲಿ, ರಾಹುಲ್ ಕಲೂತಿ, ಸಾಗರ ಚವಜ ಮಾತನಾಡಿದರು. ಮಲ್ಲಪ್ಪ ಸಿಂಗಾಡಿ, ಲಕ್ಷ್ಮಣ ದೇಸಾರಟ್ಟಿ, ನೀಲೇಶ ದೇಸಾಯಿ ಸೇರಿದಂತೆ ಅನೇಕ ಮುಖಂಡರಿದ್ದರು.