ಶ್ರೀ ಸಿದ್ಧಾರೂಢಮಠ ಧಾರ್ಮಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಗೆ ಸಹಕಾರ: ಮುಖ್ಯಮಂತ್ರಿ

cm
Advertisement

ಹುಬ್ಬಳ್ಳಿ: ಶ್ರೀ ಸದ್ಗುರು ಸಿದ್ಧಾರೂಢಮಠಕ್ಕೆ ರವಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭೇಟಿ ನೀಡಿ ಶ್ರೀ ಸಿದ್ಧಾರೂಢರು, ಶ್ರೀ ಗುರುನಾಥರೂಢರ ದರ್ಶನ ಪಡೆದರು.
ಬಳಿಕ ರಾಜ್ಯ ಸರ್ಕಾರ ಶ್ರೀ ಸಿದ್ಧಾರೂಢಮಠಕ್ಕೆ ಬಿಡುಗಡೆ ಮಾಡಿದ 1 ಕೋಟಿ ರೂ. ಅನುದಾನದಲ್ಲಿ ಬಿಡುಗಡೆಯಾದ 50 ಲಕ್ಷ ರೂ. ಮೊತ್ತ ಪಾವತಿಯ ಚೆಕ್‌ನ್ನು ಶ್ರೀ ಸಿದ್ಧಾರೂಢಮಠದ ಟ್ರಸ್ಟ್ ಕಮೀಟಿ ಅಧ್ಯಕ್ಷ ಧರಣೇಂದ್ರ ಜವಳಿ ಅವರಿಗೆ ಹಸ್ತಾಂತರಿಸಿದರು.
ಟ್ರಸ್ಟಿಗಳಾದ ಗೋವಿಂದ ಮಣ್ಣೂರ, ಹುನುಮಂತ ಕೊಟಬಾಗಿ ಹಾಗೂ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಘಿ ಹಾಗೂ ಇತರರಿದ್ದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಶ್ರೀ ಸಿದ್ಧಾರೂಢಮಠವನ್ನು ಧಾರ್ಮಿಕ ಪ್ರವಾಸಿ ತಾಣವಾಗಿ ರೂಪಿಸಲು ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಬರುವ ಭಕ್ತರಿಗೆ ವಸತಿ ವ್ಯವಸ್ಥೆಗೆ ಕಟ್ಟಡ ನಿರ್ಮಾಣ, ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕಾಗಿದೆ ಎಂದರು.
ಇದಕ್ಕಾಗಿ ಮಾಸ್ಟರ್ ಪ್ಲ್ಯಾನ್ ಅಗತ್ಯವಾಗಿದೆ. ಮಾಸ್ಡರ್ ಪ್ಲ್ಯಾನ್ ಇಲ್ಲದೇ ಅಭಿವೃದ್ಧಿಪಡಿಸುವುದು ಕಷ್ಟ. ಸರ್ಕಾರ ಏನೊ ಒಂದಿಷ್ಟು ದುಡ್ಡು ಕೊಟ್ಟಿತು. ಅಲ್ಲೊಂದು ಇಲ್ಲೊಂದು ಕಟ್ಟಡ ಕಟ್ಟಿಕೊಂಡು ಹೋಗುವುದು ಆಗುತ್ತದೆ. ಈವರೆಗೆ ಹಾಗೆಯೇ ಮಾಡಲಾಗಿದೆ. ಇದರಿಂದ ವ್ಯವಸ್ಥಿತ ರೀತಿ ಭಕ್ತರಿಗೆ ಅನುಕೂಲ ಕಲ್ಪಿಸಿದಂತಾಗುವುದಿಲ್ಲ. ಹೀಗಾಗಿ ಮಾಸ್ಟರ್ ಪ್ಲ್ಯಾನ್ ರೂಪಿಸಬೇಕು ಎಂದು ಟ್ರಸ್ಟ್ ನವರಿಗೆ ಹೇಳಿದ್ದೇನೆ ಎಂದು ತಿಳಿಸಿದರು.
ಶ್ರೀ ಸಿದ್ಧಾರೂಢರು ಪರಂಪರೆಯ ಮೇರು ಸಾಧಕರು. ಪವಾಡಗಳ ಮೂಲಕ, ಚಿಂತನೆಯ ಮೂಲಕ ಭಕ್ತರ ಕಷ್ಟ ದೂರವಾಗಿಸಿ ಬದುಕಿಗೆ ಸನ್ಮಾರ್ಗ ತೋರಿದವರು. ಹೀಗಾಗಿ ಬರೀ ನಮ್ಮ ನಾಡಿನ ಭಕ್ತರಷ್ಟೇ ಅಲ್ಲ. ಮಹಾರಾಷ್ಡ್ರ ಹಾಗೂ ಇತರ ರಾಜ್ಯದಿಂದಲೂ ಭಕ್ತರು ಬರುತ್ತಾರೆ. ಸದಾ ಅವರು ಭಕ್ತರಿಗೆ ಆಶೀರ್ವಾದ ಮಾಡಿ ಮಾರ್ಗ ತೋರುತ್ತಿದ್ದಾರೆ. ಅಂತೆಯೇ ಭಕ್ತ ಸಮೂಹ ಸಾಗರೋಪಾದಿಯಲ್ಲಿ ಮಠಕ್ಕೆ ಆಗಮಿಸುತ್ತಿದ್ದಾರೆ ಎಂದರು.

ಸಿದ್ದಾರೂಢ