ಬಾಗಲಕೋಟೆ: ಚುನಾವಣೆ ಸಂದರ್ಭದಲ್ಲಿ ರಾಜ್ಯ ಸರ್ಕಾರ ದುಡ್ಡು ಹೊಡೆಯಲು ಬೇಕಾಬಿಟ್ಟಿ ಟೆಂಡರಗಳನ್ನು ಕರೆದಿದೆ ಕೂಡಲೇ ಅದನ್ನು ಕೈಬಿಡದಿದ್ದರೆ ನಾವು ಅಧಿಕಾರಕ್ಕೆ ಬಂದ ತಕ್ಷಣ ಆಯೋಗ ರಚಿಸಿ ತನಿಖೆಗೆ ಆದೇಶಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನವನಗರದ ಪ್ರೆಸ್ ಕ್ಲಬ್ ನಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನನ್ನ ೪೦ ವರ್ಷದ ರಾಜಕೀಯ ಇತಿಹಾಸದಲ್ಲಿ ಎಂದೂ ನೋಡದಷ್ಟು ಭ್ರಷ್ಟ ಸರ್ಕಾರ ಈಗ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ರಾಜ್ಯದಲ್ಲಿದೆ. ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದ ಕಳಂಕ ಹೊತ್ತು ನಿಂತಿದೆ ಎಂದು ವಾಗ್ದಾಳಿ ನಡೆಸಿದರು.
ರಾಜ್ಯ ಸರ್ಕಾರದಲ್ಲಿ ಶೇ.೪೦ ಕಮಿಷನ್ ಪಡೆಯಲಾಗುತ್ತಿದೆ ಎಂದು ದೂರಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಯ್ಯ ಪತ್ರ ಬರೆದರೂ ಪ್ರಧಾನಿ ಕಚೇರಿಯಿಂದ ಯಾವ ಉತ್ತರವೂ ಬರಲಿಲ್ಲ. ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶಿಸುವುದನ್ನು ಬಿಟ್ಟು ಲಜ್ಜೆಗೆಟ್ಟವರಂತೆ ದಾಖಲೆ ಕೇಳುತ್ತಾರೆ. ತಪ್ಪು ಮಾಡಿಲ್ಲ ಎಂದಾದರೆ ನಮ್ಮ ಅವಧಿಯದ್ದೇ ಆಗಿರಲಿ, ನಿಮ್ಮ ಅವಧಿಯದ್ದೆ ಆಗಿರಲಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಲಿಂಗಾಯತರಿಗೆ ಅವಕಾಶ ನೀಡಬೇಕೆಂಬ ಆಗ್ರಹ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಲಿಂಗಾಯತರು,ಕುರಬರು, ಒಕ್ಕಲಿಗರು, ಹಿಂದುಳಿದವರು, ಬ್ರಾಹ್ಮಣರು, ಅಲ್ಪಸಂಖ್ಯಾತರು, ದಲಿತರು ಹೀಗೆ ಎಲ್ಲರಿಗೂ ಅವಕಾಶ ಸಿಗಬೇಕು. ಸಾಮಾಜಿಕ ನ್ಯಾಯ ಇರೋದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಬಿಜೆಪಿಯಲ್ಲಿ ಮುಸ್ಲಿಂರು, ಕ್ರಿಶ್ಚಿಯನ್ನರಿಗೆ ಅವಕಾಶ ಕೊಡ್ತಾರ ಎಂದು ಪ್ರಶ್ನೆ ಮಾಡಿದರು.
ಬಿಬಿಸಿ ವಾಹಿನಿ ಮೇಲೆ ನಡೆದ ದಾಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಶೇ.೯೯ ದಾಳಿಗಳು ವಿಪಕ್ಷದವರ ಮೇಲೆ ನಡೆದಿದೆ ಎಂದರು.
ಬಾದಾಮಿ ಕ್ಷೇತ್ರದ ಋಣ ಮರೆಯಲಾರೆ..!
ದೂರದ ಮೈಸೂರಿನಿಂದ ಬಂದು ನಿಂತರೂ ಬಾದಾಮಿ ಜನ ಗೆಲ್ಲಿಸಿದ್ದಾರೆ. ಪಾಪಾ ಅವರು ಒಳ್ಳೆಯವರು ಅವರ ಉಪಕಾರವನ್ನು ಎಂದಿಗೂ ಮರೆಯಲಾರೆ ಎಂದು ಕೃತಜ್ಞತೆ ಭಾವದಿಂದ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಮರಿಸಿದರು.
ಕಾನಿಪ ಜಿಲ್ಲಾಧ್ಯಕ್ಷ ಆನಂದ ದಲಭಂಜನ ವೇದಿಕೆಯಲ್ಲಿದ್ದರು, ಪ್ರಧಾನ ಕಾರ್ಯದರ್ಶಿ ಶಂಕರ ಕಲ್ಯಾಣಿ ಸ್ವಾಗತಿಸಿದರು.
ಓಡಾಟಕ್ಕೆ ದೂರವಾಗುತ್ತದೆ ಎಂಬ ಏಕ ಮಾತ್ರ ಕಾರಣದಿಂದ ಹತ್ತಿರದ ಕ್ಷೇತ್ರವಾಗಿ ನಾನು ಕೋಲಾರ ಆಯ್ಕೆ ಮಾಡಿಕೊಂಡಿದ್ದೇನೆ. ಜನ ಇಲ್ಲಿಯೇ ಸ್ಪರ್ಧಿಸುವಂತೆ ಸೂಚಿಸುತ್ತಿದ್ದಾರೆ. ತೀರ್ಮಾನವನ್ನು ಹೈಕಮಾಂಡ್ ಗೆ ಬಿಟ್ಟಿದ್ದೇನೆ ಅವರು ಸೂಚಿಸಿದಲ್ಲಿ ಸ್ಪರ್ಧಿಸುತ್ತೇನೆ ಎಂದರು.