ಜೆಡಿಎಸ್‌ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

Advertisement

ಬೆಂಗಳೂರು: ಎಲೆಕ್ಷನ್‌ಗೆ ಭರ್ಜರಿ ತಯಾರಿ ಆರಂಭಿಸಿರುವ ಜೆಡಿಎಸ್‌ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ಗಿಂತ ಮುಂಚಿತವಾಗಿಯೇ 93 ಅಭ್ಯರ್ಥಿಗಳ ಪಟ್ಟಿ ಘೋಷಿಸಿ ಚುನಾವಣೆಗೆ ರಣಕಹಳೆ ಮೊಳಗಿಸಿದೆ.
ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಮ್ಮುಖದಲ್ಲಿ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ. ಗೊಂದಲ ಮತ್ತು ಭಿನ್ನಾಭಿಪ್ರಾಯ ಹಾಗೂ ಅಸಮಾಧಾನ ಇರುವ ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಮಾಡದೇ ಜಾಣ್ಮೆಯ ನಡೆಯನ್ನು ಜೆಡಿಎಸ್‌ ಅನುಸರಿಸಿದೆ. ಹಾಲಿ ಶಾಸಕ ಜಿಟಿ ದೇವೇಗೌಡ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ಟಿಕೆಟ್‌ ನೀಡಿರುವ ದಳಪತಿಗಳು, ಜಿಟಿಡಿ ಪುತ್ರ ಹರೀಶ್‌ ಗೌಡ ಅವರಿಗೂ ಹುಣಸೂರು ಕ್ಷೇತ್ರದಿಂದ ಟಿಕೆಟ್‌ ನೀಡಿದ್ದಾರೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಎಲ್ಲಾ ಹಾಲಿ ಜೆಡಿಎಸ್‌ ಶಾಸಕರಿಗೂ ಟಿಕೆಟ್ ಘೋಷಿಸಲಾಗಿದೆ. ರಾಮನಗರದಿಂದ ಅನಿತಾ ಕುಮಾರಸ್ವಾಮಿ ಅವರ ಬದಲಿಗೆ ನಿಖಿಲ್‌ ಕುಮಾರಸ್ವಾಮಿ ಸ್ಪರ್ಧಿಸಲಿದ್ದರೆ, ಚನ್ನಪಟ್ಟಣದಿಂದ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಣಕ್ಕೆ ಇಳಿಯಲಿದ್ದಾರೆ.
ಮೊದಲ ಪಟ್ಟಿಯಲ್ಲಿ ರೇವಣ್ಣಗೆ ಸ್ಥಾನವೇ ಇಲ್ಲ !
ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಮಾಜಿ ಸಚಿವ ಎಚ್‌ಡಿ ರೇವಣ್ಣ ಅವರ ಹೆಸರು ಇಲ್ಲದಿರುವುದು ಭಾರೀ ಕುತೂಹಲ ಮೂಡಿಸಿದೆ. ಹಾಸನ ಜಿಲ್ಲೆಯ ಯಾವುದೇ ಕ್ಷೇತ್ರಕ್ಕೂ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಮಾಡಿಲ್ಲ. ಹಾಸನ ಜೆಡಿಎಸ್‌ನಲ್ಲಿ ಕೆಲವು ಗೊಂದಲಗಳು ಇರುವುದರಿಂದ ಇಲ್ಲಿನ ಕ್ಷೇತ್ರಗಳಿಗೆ ಟಿಕೆಟ್‌ ಬಿಡುಗಡೆ ಮಾಡಿಲ್ಲ. ಅದಲ್ಲದೇ ಹಾಸನದಿಂದ ಭವಾನಿ ರೇವಣ್ಣ ಅವರು ಕಣಕ್ಕಿಳಿಯುವ ಸಾಧ್ಯತೆ ಇರುವುದರಿಂದ ಅಲ್ಲಿಯೂ ಜೆಡಿಎಸ್‌ ಕಾದು ನೋಡುವ ತಂತ್ರ ಅನುಸರಿಸಿದೆ.
ಅರಸೀಕೆರೆ ಶಾಸಕ ಕೆಎಂ ಶಿವಲಿಂಗೇಗೌಡ, ಕಡೂರು ಶಾಸಕ ವೈಎಸ್‌ವಿ ದತ್ತಾ, ಅರಕಲಗೂಡು ಶಾಸಕ ಎಟಿ ರಾಮಸ್ವಾಮಿ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಣೆ ಮಾಡಿಲ್ಲ. ಅದರಂತೆ ಅನೇಕ ಕ್ಷೇತ್ರಗಳಿಗೆ ಜೆಡಿಎಸ್‌ ಟಿಕೆಟ್‌ ಘೋಷಣೆ ಮಾಡದೇ ಕಾದು ನೋಡುವ ತಂತ್ರ ಅನುಸರಿಸಿದೆ. ಒಂದಿಷ್ಟು ಕ್ಷೇತ್ರ ಹೊರತುಪಡಿಸಿ ಭಾಗಶಃ ಎಲ್ಲ ಹಾಲಿ ಶಾಸಕರಿಗೂ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ.