ಕುಕ್ಕರ್ ಬಾಂಬ್ ಸ್ಫೋಟ ಲಘುವಾಗಿ ಪರಿಗಣಿಸಿದ ಕಾಂಗ್ರೆಸ್: ಜಗದೀಶ ಶೆಟ್ಟರ್‌

Advertisement

ಹುಬ್ಬಳ್ಳಿ: ಮಂಗಳೂರಿನಲ್ಲಿ ನಡೆದ ಕುಕ್ಕರ್‌ ಬಾಂಬ್ ಸ್ಫೋಟ ಪ್ರಕರಣವನ್ನು‌ ಕಾಂಗ್ರೆಸ್ ಲಘುವಾಗಿ‌ ಪರಿಗಣಿಸಿದ್ದು, ಇದು ಅವರ ನೀತಿಯನ್ನು ತಿಳಿಸುತ್ತಿದೆ. ವೋಟ್‌ ಬ್ಯಾಂಕ್ ರಾಜಕಾರಣ, ಅಲ್ಪಸಂಖ್ಯಾರ ಓಲೈ ಕೆ ಮಾಡಿಕೊಂಡು ಬಂದು ದೇಶವನ್ನು ಹಾಳು ಮಾಡಿದ್ದಾರೆ. ಅದೇ ದಾರಿಯಲ್ಲಿ ಡಿ.ಕೆ.ಶಿವಕುಮಾರ್ ಅವರು ನಡೆಯುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
ಶನಿವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ಬಗ್ಗೆ ಕಾಂಗ್ರೆಸ್‌ಗೆ ಯಾವ ಬದ್ಧತೆ ಇದೆ ಎಂದು ಪ್ರಶ್ನಿಸಿದರಲ್ಲದೆ, ಮತದಾರರ ದತ್ತಾಂಶ ಕಳವು ಪ್ರಕರಣದ ಗಮನ ಬೇರೆಡೆ ಸೆಳೆಯಲು‌ ಬಿಜೆಪಿ ಮಂಗಳೂರಿನಲ್ಲಿ‌ ಕುಕ್ಕರ್ ಬಾಂಬ್ ಸ್ಫೋಟ ಮಾಡಿಸಿದೆ ಎಂಬ‌ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
ಡಿ.ಕೆ. ಶಿವಕುಮಾರ್ ಅವರಿಗೆ ಪ್ರಬುದ್ಧತೆ ಇಲ್ಲ. ಅವರು ಯಾವ ಹಿನ್ನೆಲೆಯಿಂದ‌ ಬಂದಿದ್ದಾರೆ, ಅವರ ಸಂಸ್ಕೃತಿ ಏನು‌‌ ಎಂದು ಎಲ್ಲರಿಗೂ ಗೊತ್ತಿದೆ ಎಂದರು.
ಘಟ‌ನೆ‌ ನಡೆದು ಇಷ್ಟು ದಿನ ಆದ‌ ನಂತರ ಈ ಹೇಳಿಕೆ ನೀಡಿರುವುದರ ಉದ್ದೇಶ ಏನು? ಸ್ಫೋಟದಿಂದ ಯಾರಾದರೂ ಮೃತಪಟ್ಟಿದ್ದರೆ ಏನು‌ ಮಾಡುತ್ತಿದ್ದರು. ಕಾಂಗ್ರೆಸ್‌ ತುಷ್ಟೀಕರಣ ನೀತಿ‌‌ ಅನುಸರಿಸುತ್ತಿದೆ‌ ಎಂದು‌‌‌ ಹೇಳಿದರು.
ದೇಶದ ಸುರಕ್ಷತೆ ವಿಷಯನ್ನು‌‌ ಕಾಂಗ್ರೆಸ್ ಹಗುರವಾಗಿ‌ ತೆಗೆದುಕೊಂಡಿದೆ. ಅದೇ ಕಾರಣಕ್ಕೆ‌‌‌‌ ದೇಶದಲ್ಲಿ‌ ಕಾಂಗ್ರೆಸ್ ಅಧಿಕಾರದಲ್ಲಿ‌ ಇದ್ದಾಗ ಯಾವುದೇ ಪ್ರಗತಿ‌ ಆಗಲಿಲ್ಲ. ಅಟಲ್ ಬಿಹಾರಿ‌‌ ವಾಜಪೇಯಿ ಪ್ರಧಾನಿಯಾಗಿದ್ದಾಗ ಮತ್ತು‌ ಈಗ ನರೇಂದ್ರ ಮೋದಿ‌ ನೇತೃತ್ವದಲ್ಲಿ ದೇಶ ಪ್ರಗತಿ‌ ಹೊಂದುತ್ತಿದೆ ಎಂದು ಹೇಳಿದರು.