ಮಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ರಾಜ್ಯೋತ್ಸವದ ಅಂಗವಾಗಿ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಕೋಟಿ ಕಂಠ ಗಾಯನವು ಮಂಗಳೂರು ನಗರದಲ್ಲಿ ಕೂಡ ಅರ್ಥಪೂರ್ಣವಾಗಿ ನಡೆಯಿತು.
ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ಅವರ ನೇತೃತ್ವದಲ್ಲಿ ಅರಬ್ಬಿಸಮುದ್ರದ ಅಲೆಗಳ ನಿನಾದದಲ್ಲಿ 50ರಷ್ಟು ಬೋಟ್‌ಗಳ ಒಂದೂವರೆ ತಾಸಿನ ಕಡಲಯಾನದಲ್ಲಿ ಕೋಟಿ ಕಂಠ ಗಾಯನ ಸೊಗಸಾಗಿ ಮೂಡಿ ಬಂತು.
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರ ಮುಂದಾಳತ್ವದಲ್ಲಿ ಮೀನುಗಾರಿಕಾ ಇಲಾಖೆ, ಮೊಗವೀರ ಸಮಾಜದ ಸಹಯೋಗದಲ್ಲಿ ಈ ಕೋಟಿ ಕಂಠ ಗಾಯನ ಮೂಡಿ ಬಂತು. ಬೋಳೂರಿನ ಸುಲ್ತಾನ್ ಬತ್ತೇರಿಯಿಂದ ಹೊರಟ ಬೋಟ್‌ಗಳು ತೋಟ ಬೆಂಗ್ರೆ ಅಳಿವೆ ಬಾಗಿಲುವರೆಗೆ 8ಕಿ.ಮೀ. ಸಾಗುವ ಮೂಲಕ ಕನ್ನಡದ ಆರು ಹಾಡುಗಳನ್ನು ಹಾಡಲಾಯಿತು.
5 ಪರ್ಸಿನ್ ಬೋಟ್ ಗಳು, 10 ಆಳ ಸಮುದ್ರ ಮೀನುಗಾರಿಕಾ ಬೋಟ್ ಗಳು, 25 ನಾಡದೋಣಿ ಗಳು, 10 ಕರೆ ಫಿಶ್ಶಿಂಗ್ ಬೋಟ್ ಗಳು ಹಾಗೂ 4 ಫೆರಿ ಬೋಟ್ ಗಳಲ್ಲಿ ಕೋಟಿ ಕಂಠಗಾಯನ ಮೂಡಿತು. ಎಲ್ಲಾ ಬೋಟ್ ಗಳ ಸಂಪೂರ್ಣ ಶೃಂಗಾರಗೊಂಡು ಕನ್ನಡದ ಬಾವುಟಗಳಿಂದ ರಾರಾಜಿಸಿತ್ತು. ಸಮುದ್ರ ನಡುವಿನ ಸೊಗಸನ್ನು ವೀಕ್ಷಿಸುತ್ತ ಬೋಟ್‌ಗಳ ಭರ್ತಿ ಜನರೊಂದಿಗೆ ಕೋಟಿ ಕಂಠಗಾಯನ ಮೂಡಿತು.