ನವದೆಹಲಿ: ಕೆನಡಾದಲ್ಲಿ ನಿಗೂಢವಾಗಿ ಹತ್ಯೆಯಾದ ಖಲಿಸ್ತಾನಿ ಉಗ್ರ ಹರ್‌ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಪಾತ್ರವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟೀನ್ ಟ್ರಡೋ ಹೇಳಿಕೆಯನ್ನು ಭಾರತ ತೀವ್ರವಾಗಿ ಖಂಡಿಸಿದೆ. ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಆರೋಪಿಸಿರುವ ಕೆನಡಾ ಸರ್ಕಾರ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಭಾರತದ ಉನ್ನತ ರಾಜತಾಂತ್ರಿಕ ಅಧಿಕಾರಿಯನ್ನು ವಜಾಗೊಳಿಸಿತ್ತು. ಇದಕ್ಕೆ ನೇರ ಪ್ರತಿಕ್ರಿಯೆ ನೀಡಿರುವ ಭಾರತ ಸರ್ಕಾರ ಕೆನಡಾ ರಾಜತಾಂತ್ರಿಕ ಅಧಿಕಾರಿಗೆ ಗೇಟ್‌ಪಾಸ್ ನೀಡಿದೆ. ಕೆನಡಾ ಅಧಿಕಾರಿ ಉಚ್ಛಾಟನೆ ಬಗ್ಗೆ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, ‘ಭಾರತದಲ್ಲಿರುವ ಕೆನಡಾದ ಹೈಕಮಿಷನರ್ ಅವರನ್ನು ಇಂದು ಕರೆಸಲಾಯಿತು. ಕೆನಡಾದ ಹಿರಿಯ ರಾಜತಾಂತ್ರಿಕರನ್ನು ಹೊರಹಾಕುವ ಭಾರತ ಸರ್ಕಾರದ ನಿರ್ಧಾರದ ಬಗ್ಗೆ ತಿಳಿಸಲಾಗಿದೆ. ಸಂಬಂಧಪಟ್ಟ ರಾಜತಾಂತ್ರಿಕರಿಗೆ ಮುಂದಿನ ಐದು ದಿನಗಳಲ್ಲಿ ಭಾರತವನ್ನು ತೊರೆಯುವಂತೆ ಸೂಚಿಸಲಾಗಿದೆ’ ಎಂದು ತಿಳಿಸಿದೆ. ನಮ್ಮ ಆಂತರಿಕ ವಿಷಯಗಳಲ್ಲಿ ಕೆನಡಾದ ರಾಜತಾಂತ್ರಿಕರ ಹಸ್ತಕ್ಷೇಪ ಮಾಡುತ್ತಿದೆ. ಭಾರತ ವಿರೋಧಿ ಚಟುವಟಿಕೆಗಳಲ್ಲಿ ಅವರು ಪಾಲ್ಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕಠಿಣ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶಾಂಗ ಸಚಿವಾಲಯ ಹೇಳಿಕೆ ನೀಡಿದೆ.