46.23 ಲಕ್ಷ ಕದ್ದ ಮೂವರ ಆರೋಪಿಗಳ ಬಂಧನ

ಆರೋಪಿಗಳ ಬಂಧನ
Advertisement

ರಾಯಚೂರು: ವಾಹನದಲ್ಲಿಟ್ಟಿದ್ದ 46.23 ಲಕ್ಷ ಹಣವನ್ನು ಕದ್ದ ಮೂವರು ಆರೋಪಿಗಳನ್ನು 48 ಗಂಟೆಗಳಲ್ಲಿ ಬಂಧಿಸುವಲ್ಲಿ ಪೋಲಿಸರು ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣೇಶ ಬಿಡಿ ಕಂಪೆನಿಯ ಸರಕು ಮಾರಾಟದಿಂದ ಸಂಗ್ರಹವಾಗಿದ್ದ ಹಣವನ್ನು ಕಂಪೆನಿಗೆ ತಲುಪಿಸದೇ ಸಿಂಧನೂರಿನ ಕನಕದಾಸ ವೃತ್ತದಲ್ಲಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಮೂವರು ಕಳ್ಳರನ್ನು ಸಿಂಧನೂರು ಠಾಣೆ ಪೊಲೀಸರು ಕಾರ್ಯಾಚರಣೆ ಬಂಧಿಸಿದ್ದಾರೆ. ಬಂಧಿತರಿಂದ 46,23,360 ನಗದು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಗಣೇಶ ಬಿಡಿ ಕಂಪೆನಿಗೆ ಸಂಬಂಧಿಸಿದ ವಾಹನ ಚಾಲಕ ಸೈಯದ್ ಜುಬೇರ್, ಆತನ ಸಹೋದರ ಸೈಯದ್ ಕಲಂದರ್ ಹಾಗೂ ಚಾಲಕನ ಸ್ನೇಹಿತ ಗಣೇಶ ಪೆದ್ದಹಳ್ಳಿ ಬಂಧಿತ ಆರೋಪಿಗಳಾಗಿದ್ದಾರೆ. ಈ ಎಲ್ಲ ಆರೋಪಿಗಳು ರಾಯಚೂರು ನಗರ ನಿವಾಸಿಗಳು ಎಂದು ಹೇಳಿದರು. ಕೊಪ್ಪಳ ಜಿಲ್ಲೆಯಲ್ಲಿ ಸರಕು ಮಾರಾಟ ಮಾಡಿಕೊಂಡು ಬರುವಾಗ ಆಗಸ್ಟ್ 18ರಂದು ಸಿಂಧನೂರಿನ ಕನಕದಾಸ ವೃತ್ತದ ಹತ್ತಿರ ವಾಹನ ನಿಲ್ಲಿಸಿ ಚಾಲಕ ಮತ್ತು ಸೆಲ್ಸಮನ್ ಇಬ್ಬರು ಖಾನಾವಳಿಗೆ ಊಟಕ್ಕೆ ಹೋಗಿ ಬರುವಷ್ಟರಲ್ಲಿ ವಾಹನದಲ್ಲಿದ್ದ 46.23ಲಕ್ಷ ಹಣ ಕಳ್ಳತನವಾಗಿತ್ತು ಎಂದು ವಿವರಿಸಿದರು.
ಈ ಕುರಿತು ಕಂಪೆನಿಯಿಂದ ಸಿಂಧನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು ಕಾರ್ಯಪ್ರವೃತ್ತರಾಗಿದ್ದ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೊಳಪಡಿಸಲಾಗಿದೆ ಎಂದು ಹೇಳಿದರು.
ಸಿಂಧನೂರು ಡಿಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ರವಿಕುಮಾರ ಎಸ್.ಕಪ್ಪತ್ತನವರ, ಪಿಎಸ್‌ಐಗಳಾದ ಸೌಮ್ಯಾ, ಎರಿಯಪ್ಪ, ಪೆಟ್ಟಯ್ಯ, ಸಿಬ್ಬಂದಿ ಸಂಗಮೇಶ, ಆದಯ್ಯ, ಅನಿಲಕುಮಾರ್, ದ್ಯಾಮಣ್ಣ, ಗೋಪಾಲ, ಶಿವಲಿಂಗಪ್ಪ, ಸುರೇಶ, ಅಮರೇಶ, ತಾಂತ್ರಿಕ ಸಹಾಯಕ ಅಜೀಮ್ ಪಾಷಾ ಅವರನ್ನೊಳಗೊಂಡ ವಿಶೇಷ ತಂಡವನ್ನು ತನಿಖೆಗೆ ರಚಿಸಲಾಗಿತ್ತು ಎಂದು ವಿವರಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ಹಾಗೂ ಆರೋಪಿಗಳ ಪತ್ತೆಯ ಯಶಸ್ವಿ ಕಾರ್ಯಾಚರಣೆ ನಡಸಿದ ತಂಡದ ಸದಸ್ಯರು ಸುದ್ದಿಗೋಷ್ಠಿಯಲ್ಲಿದ್ದರು.

ಆರೋಪಿಗಳ ಬಂಧನ