ಬಾಗಲಕೋಟೆ(ರಬಕವಿ-ಬನಹಟ್ಟಿ): ೪೦ ವರ್ಷಗಳಿಂದ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದ ಪ್ರದೇಶಕ್ಕೆ ತಾಲೂಕಾಡಳಿತದಿಂದ ಮಂಗಳವಾರ ದಿಢೀರ್ ಆಗಮಿಸಿ ಸುಮಾರು ೫೦೦ ಅಡಿಯಷ್ಟು ಉದ್ದನೆಯ ತಡೆಗೋಡೆಯನ್ನು ಕೇವಲ ಒಂದೇ ದಿನದಲ್ಲಿ ನಿರ್ಮಿಸುವ ಮೂಲಕ ಸಮಸ್ಯೆ ಇತ್ಯರ್ಥಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಏನಿದು ವಿವಾದ:
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮೆಹಬೂಬ ಸುಬಾನಿ ದರ್ಗಾ ಹಾಗೂ ಈದ್ಗಾ ಜಾಗೆಯನ್ನು ವಕ್ಫ್ ಬೋರ್ಡ್ಗೆ ಸಂಬಂಧಿಸಿದ ಜಾಗೆಗೆ ಗಡಿ ರೇಖೆ ಗುರ್ತಿಸಬೇಕೆಂಬುದಾಗಿತ್ತು. ಆಸ್ತಿಯ ಉತ್ತರ ಭಾಗದಲ್ಲಿ ಕಳೆದ ೪೦ ವರ್ಷಗಳಿಂದ ಸಾರ್ವಜನಿಕ ಸಮಾರಂಭ, ಧಾರ್ಮಿಕ ಉತ್ಸವ ಹಾಗು ಪ್ರತಿ ವರ್ಷ ಸಾರ್ವಜನಿಕ ಗಣಪತಿ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಚರಿಸುತ್ತಿದ್ದರು.
೨೦೦೧ ರಲ್ಲಿ ವಕ್ಫ್ ಬೋರ್ಡ್ವು ನ್ಯಾಯಾಲಯ ಮೊರೆ ಹೋಗಿ ಈ ಪ್ರದೇಶ ವಕ್ಫ್ ಆಸ್ತಿಗೆ ಸಂಬಂಧಿಸಿದ್ದು ಎಂದು ವಾದ ಮಾಡಿತ್ತು. ಇದರನ್ವಯ ನ್ಯಾಯಾಲಯದಲ್ಲಿ ೨೦೦೬, ೨೦೧೧ ಹಾಗು ೨೦೧೭ ರಲ್ಲಿ ಪರಿಶೀಲನೆಗೆ ಕೋರಿ ಆದೇಶ ನೀಡುತ್ತು.
ಇವೆಲ್ಲದರ ಮಧ್ಯ ದಾವಾ ಜಮೀನು ಅಂದರೆ ಉತ್ತರ ಭಾಗದ ರಸ್ತೆಯ ಎಡಬದಿಯಲ್ಲಿ ಡಿಸ್ ಫಾರೆಸ್ಟ್ ಮಾಡಿದ ಕಂದಾಯ ಇಲಾಖೆಯ ರಿ.ಸ.ನಂ.೩ ಪ್ರದೇಶದಲ್ಲಿ ಪೂರ್ವ-ಪಶ್ಚಿಮವಾಗಿ ೫೦೦ ಹಾಗು ಉತ್ತರ-ದಕ್ಷಿಣದಲ್ಲಿ ೮೦ ಅಡಿಯಷ್ಟು ಸಾರ್ವಜನಿಕ ಸಮಾರಂಭಗಳನ್ನು ನಡೆಸುತ್ತಿದ್ದೇವೆಂದು ಗಜಾನನ ಸಮಿತಿ ತಿಳಿಸಿತ್ತು.
ಬೀಡುಬಿಟ್ಟ ಅಧಿಕಾರಿಗಳ ದಂಡು: ವಿವಾದಿತ ಪ್ರದೇಶವಾಗಿರುವ ಈದ್ಗಾ ಪ್ರದೇಶದ ಗಡಿ ಗುರ್ತಿಸುವಲ್ಲಿ ತಾಲೂಕಾಡಳಿತ ಸೋಮವಾರ ಕ್ರಮ ಕೈಗೊಂಡ ಹಿನ್ನಲೆ ಬೆಳಗ್ಗಿನಿಂದ ರಾತ್ರಿಯವರೆಗೆ ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ, ತಹಶೀಲ್ದಾರ ದೊಡ್ಡಪ್ಪ ಹೂಗಾರ, ನಗರಸಭಾ ಪೌರಾಯುಕ್ತ ಅಶೋಕ ಗುಡಿಮನಿ ಸೇರಿದಂತೆ ನೂರಾರು ಅಧಿಕಾರಿಗಳ ತಂಡವೇ ಬೀಡು ಬಿಟ್ಟಿದೆ.
ವಿವಾದಕ್ಕೆ ತೆರೆ? ಕೋಮು ಗಲಭೆಗೆ ಕೇಂದ್ರಬಿಂದುವಾಗಿ ಪರಿಣಮಿಸಿದ ಈ ಪ್ರದೇಶಕ್ಕೆ ಸರ್ಕಾರ ಸಂಪೂರ್ಣ ಶಮನ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ಬಗ್ಗೆ ಮೆಲ್ನೋಟಕ್ಕೆ ಕಂಡು ಬರುವ ಅಂಶವಾಗಿವೆ.