ಬೆಂಗಳೂರು: ಕರ್ನಾಟಕದಲ್ಲಿ ಅತಿ ದೊಡ್ಡ ಕಬ್ಬಿಣದ ಕಾರ್ಖಾನೆ ಇದ್ದು, 4-5 ವರ್ಷಗಳಲ್ಲಿ ವಿಶ್ವದ ಅತಿ ದೊಡ್ಡ ಕಬ್ಬಿಣ ಅದಿರು ಉತ್ಪಾದನೆ ಮಾಡುವ ರಾಜ್ಯವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಭಾರತ ಸರ್ಕಾರದ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯದಿಂದ ಹಮ್ಮಿಕೊಂಡಿದ್ದ ವಾಣಿಜ್ಯ ಕಲ್ಲಿದ್ದಲು ಗಣಿ ಹರಾಜು ಮತ್ತು ಗಣಿಗಾರಿಕೆ ವಲಯದಲ್ಲಿನ ಅವಕಾಶಗಳ ಕುರಿತ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಒರಿಸ್ಸಾ ಗಣಿಗಾರಿಕೆಯ ರಾಜ್ಯವಾಗಿದೆ. ಅಲ್ಲಿ ಗಣಿಗಾರಿಕೆ ಪ್ರಮುಖ ಉದ್ಯಮ. ಅದನ್ನು ಬೇರೆ ರಾಜ್ಯಗಳಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಲ್ಲಿನ ನೀತಿಗಳನ್ನೇ ಇತರೆ ರಾಜ್ಯಗಳಿಗೆ ಅನ್ವಯಿಸುವುದು ಕೂಡ ಸೂಕ್ತವಲ್ಲ. ರಾಜ್ಯದಲ್ಲಿರುವ ಗುಣಮಟ್ಟದ ಗಣಿಗಳಿಂದ ಮಾತ್ರ ಉತ್ಪಾದನೆ ಸಾಧ್ಯವಾಗಲಿದೆ ಎಂದರು.
ಇಂಧನ, ಗಣಿ ಹಾಗೂ ಉಕ್ಕು ಸಚಿವಾಲಯಗಳು ತಂತ್ರಜ್ಞಾನವನ್ನು ಬಳಕೆ ಮಾಡಬೇಕು ಹಾಗೂ ಬೇಡಿಕೆಯಲ್ಲಿರುವ ಖನಿಜಗಳ ಉತ್ಪಾದನೆಗೆ ತೊಡಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.
ಅನೇಕ ಗಣಿ ಕಂಪನಿಗಳು ಕೋಲಾರ ಚಿನ್ನದ ಗಣಿ ಮರು ಆರಂಭಿಸಲು ಮನವಿ ಸಲ್ಲಿಸಿವೆ. ಗಣಿ ನೀತಿಯಲ್ಲಿ
ರಾಜ್ಯ ಸರ್ಕಾರ ನಿಯಮಗಳನ್ನು ಸರಳೀಕರಣಗೊಳಿಸಿದೆ. ಗಣಿ ಉದ್ಯಮಿಗಳು ರಾಜ್ಯದಲ್ಲಿ ಗಣಿಗಾರಿಕೆ ನಡೆಸಲು ಆಗಮಿಸಿ, ಈ ಮೂಲಕ ರಾಜ್ಯದ ಆದಾಯ ವೃದ್ಧಿಗೆ ಕೊಡುಗೆ ನೀಡಬೇಕೆಂದರು.