29ಕ್ಕೆ ಪಂಚಮಸಾಲಿ ಮೀಸಲಾತಿ ಘೋಷಣೆ ಭರವಸೆ‌ ನೀಡಿದ ಸಿಎಂ: ಯತ್ನಾಳ್

Advertisement

ಬೆಳಗಾವಿ: ಪಂಚಮಸಾಲಿ ಹೋರಾಟಕ್ಕೆ ಸರಕಾರ ಮಣಿದಿದ್ದು, ಗುರುವಾರ 2ಎ ಮೀಸಲಾತಿ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದು ಹೋರಾಟ ಸಮಿತಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ತಾಯಿ ಮೇಲೆ ಆಣೆ ಮಾಡಿ, ಆಯೋಗದ ವರದಿಯನ್ನು ಸರಕಾರ ಒಪ್ಪಿಕೊಂಡಿದೆ. ಬುಧವಾರ ಸರ್ವಪಕ್ಷ ಸಭೆ ಕರೆದು, ಗುರುವಾರ 2ಎ ಘೋಷಣೆ ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ದೇವರ ಸಾಕ್ಷಿಯಾಗಿ ಹೇಳಿದ್ದಾರೆ ಎಂದು ಯತ್ನಾಳ ಹೇಳಿದರು.
ಪಂಚಮಸಾಲಿಗಳಿಗೆ ಒಬ್ಬರೇ ಸ್ವಾಮಿಗಳು ಅವರು ಕೂಡಲ ಸಂಗಮದ ಸ್ವಾಮಿಗಳು ಎಂದು ಯತ್ನಾಳ ಹೇಳಿದರು. ಜನಶಕ್ತಿಯ ಮುಂದೆ ಯಾರೇ ಇದ್ದರೂ ಬಗ್ಗಬೇಕಾಗುತ್ತದೆ ಎಂದರು.
ಕೊಡ್ತೀರೋ ಇಲ್ವೋ? ಕೊಡದಿದ್ರೆ ಈಗ್ಲೇ ಹೇಳಿ ಬಿಡಿ ಎಂದೆವು. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರು ವರದಿ ಕೊಟ್ಟಿದ್ದಾರೆ. ಅವರು ಪಂಚಮಸಾಲಿಗಳಿಗೆ ಮೀಸಲಾತಿ ಕೊಡುವುದು ಸೂಕ್ತ ಎಂದು ಹೇಳಿದ್ದಾರೆ ಎಂದರು. ಒಂದು ವೇಳೆ ಘೋಷಣೆ ಮಾಡದೇ ಹೋದರೆ ಅವರನ್ನು ದಂಡೆಗೆ ಹಚ್ಚುವವರೆಗೆ ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಇದಕ್ಕೂ ಮೊದಲು ಬಸವಜಯ ಮೃತ್ಯುಂಜಯ ಸ್ವಾಮೀಜಿ, ವಿಜಯಾನಂದ ಕಾಶಪ್ಪನವರ್, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಸೇರಿದಂತೆ ಹಲವರು ಮಾತನಾಡಿದರು.