ಹುಬ್ಬಳ್ಳಿ: ಧಾರವಾಡದ ಮುಮ್ಮಿಗಟ್ಟಿಯಲ್ಲಿ ತ್ವರಿತವಾಗಿ ಗ್ರಾಹಕರನ್ನು ತಲುಪುವ ಉತ್ಪನ್ನಗಳ ಕ್ಲಸ್ಟರ್ ನಿರ್ಮಾಣಕ್ಕೆ ಮೂಹೂರ್ತ ಕೂಡಿ ಬಂದಿದ್ದು, ಅ 28 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಕಂಪನಿಗಳೊಂದಿಗೆ ಒಡಂಬಡಿಕೆಗೆ ಸಹಿ ಹಾಕುವರು ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.
ರವಿವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಡೆನಿಸನ್ಸ್ ಹೋಟೆಲ್‌ನಲ್ಲಿ 10 ರಿಂದ 15 ಕಂಪನಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹಿ ಹಾಕುವರು ಎಂದು ಹೇಳಿದರು.
ದೇಶದಲ್ಲಿ ಬೇರೆ ಬೇರೆ ಕೈಗಾರಿಕೆಗಳಿವೆ. ಅದರಲ್ಲಿ ನಮ್ಮ ಕರ್ನಾಟಕ ಹೆಸರುವಾಸಿಯಾಗಿದ್ದು ಐಟಿ ಕೈಗಾರಿಕೆಯಲ್ಲಿ. ಯುವಕರಿಗೆ ಉದ್ಯೋಗ ನೀಡಲು ಐಟಿಯಿಂದ ಮಾತ್ರ ಸಾಧ್ಯವಿಲ್ಲ. ಉತ್ಪಾದಕತೆಯಿಂದ ಸಾಧ್ಯ. ಉತ್ಪಾದಕತೆಯಲ್ಲಿ ದೊಡ್ಡ ಕೈಗಾರಿಕೆ ಎಂದರೆ ಎಫ್‌ಎಂಸಿಜಿ ಒಂದಾಗಿದೆ. ಇದರಲ್ಲಿ ಮನುಷ್ಯರು ದಿನನಿತ್ಯ ಬಳಕೆ ಮಾಡುವ ಸಾಬೂನು, ಪೇಸ್ಟ್ ಸೇರಿದಂತೆ ಇತರೆ ವಿವಿಧ ಉತ್ಪನ್ನಗಳನ್ನು ಉತ್ಪಾದಕತೆ ಮಾಡಲಾಗುತ್ತದೆ. ಒಂದು ವರ್ಷದಲ್ಲಿ ಸುಮಾರು 12 ಲಕ್ಷ ಕೋಟಿ ವಹಿವಾಟು ಎಫ್‌ಎಂಸಿಜಿಯಿಂದ ಆಗುತ್ತಿದೆ ಎಂದರು.
ನಮ್ಮ ರಾಜ್ಯವು ಎಫ್‌ಎಂಸಿಜಿ ಬಳಕೆಯಲ್ಲಿ ಮುಂಚೂಣಿಯಲ್ಲಿದೆ. ಆದರೆ ಶೇ.15 ರಷ್ಟು ಮಾತ್ರ ದಿನಬಳಕೆ ವಸ್ತುಗಳು ನಮ್ಮ ರಾಜ್ಯದಲ್ಲಿ ಉತ್ಪಾದಕತೆ ಉಂಟಾಗುತ್ತಿದೆ. ಶೇ.85 ರಷ್ಟು ವಸ್ತುಗಳನ್ನು ನಾವು ಬೇರೆ ರಾಜ್ಯಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಧಾರವಾಡ ಮುಮ್ಮಿಗಟ್ಟಿ ಬಳಿ ಎಫ್‌ಎಂಸಿಜಿ ಕ್ಲಸ್ಟರ್ ಮಾಡುವ ಉದ್ದೇಶವಿತ್ತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಆಸಕ್ತಿ ವಹಿಸಿಕೊಂಡು ಸಂಪುಟದಲ್ಲಿ ಒಪ್ಪಿಗೆ ನೀಡಿದ್ದಾರೆ. ಅದರಂತೆ ಅ.28 ರಂದು 10 ರಿಂದ 15 ಕಂಪನಿಗಳು ಒಡಂಬಡಿಕೆ ಮಾಡಿಕೊಳ್ಳಲಿದ್ದು, ಐದು ವರ್ಷಗಳ ಕಾಲ ನಮ್ಮಲ್ಲಿ ವಹಿವಾಟು ಮಾಡುವರು. ಅದೇ ರೀತಿ ಸರ್ಕಾರದಿಂದ ಸಬ್ಸಿಡಿಯನ್ನು ಪಡೆಯಬಹುದು ಎಂದು ಹೇಳಿದರು.
ಈ ಭಾಗದಲ್ಲಿ ಎಫ್‌ಎಂಸಿಜಿ ಕ್ಲಸ್ಟರ್ ನಿರ್ಮಾಣವಾಗುವುದರಿಂದ ಈ ಭಾಗದ ಯುವಕರಿಗೆ ಉದ್ಯೋಗ ನೀಡಬಹುದು. ಮುಂಬರುವ 7 ರಿಂದ 8 ವರ್ಷಗಳಲ್ಲಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿವೆ ಎಂದರು.