28ರಂದು ರಾಜ್ಯಕ್ಕೆ ಶಾ ಭೇಟಿ: ಕೇಸರಿ ಪಡೆಯ ಹೈವೋಲ್ಟೇಜ್ ಸಭೆ

amit shah
Advertisement

ಹುಬ್ಬಳ್ಳಿ: ಜನವರಿ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿ ಹಾಗೂ ಬೆಳಗಾವಿಗೆ ಆಗಮಿಸಲಿದ್ದು ಕಿತ್ತೂರು ಕರ್ನಾಟಕದಲ್ಲಿ ಚುನಾವಣಾ ಕಹಳೆಯನ್ನು ಮೊಳಗಿಸಲಿದ್ದಾರೆ. ಕಿತ್ತೂರು ಪ್ರಾಂತ್ಯದ ಹೆಬ್ಬಾಗಿಲಾಗಿರುವ ಹುಬ್ಬಳ್ಳಿ ಹಾಗೂ ವ್ಯೂಹಾತ್ಮಕವಾಗಿ ಕರ್ನಾಟಕದ ಆಯಕಟ್ಟಿನ ಜಾಗವಾಗಿರುವ ಬೆಳಗಾವಿ ನೆಲದಿಂದ ಮುಂಬರುವ ಚುನಾವಣಾ ಶಂಖನಾದವನ್ನು ಬಿಜೆಪಿಯ ನಾಯಕ ಮಾಡುತ್ತಿರುವುದು ಪಕ್ಷದ ಮಟ್ಟಿಗೆ ಬಹುದೊಡ್ಡ ವಿದ್ಯಮಾನವಾಗಿದೆ.
ಹುಬ್ಬಳ್ಳಿ ಬಿವಿಬಿ ಎಂಜಿನಿಯರಿಂಗ್ ಕಾಲೇಜಿನ ಅಮೃತ ಮಹೋತ್ಸವ ಹಾಗೂ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್ ಉದ್ಘಾಟನೆಗೆ ಆಗಮಿಸುತ್ತಿರುವುದು ಅವರ ಭೇಟಿಯ ಅಧಿಕೃತ ಭಾಗ. ಇದರ ಆಚೆ ನಿಸ್ಸಂಶಯವಾಗಿ ಇದು ಚುನಾವಣಾ ಅಖಾಡಾ'ಕ್ಕೆ ಕಿತ್ತೂರು ಪ್ರಾಂತ್ಯದಲ್ಲಿ ಬಿಜೆಪಿಯನ್ನು ಸಜ್ಜುಗೊಳಿಸಲು ನೀಡುತ್ತಿರುವ ಭೇಟಿ. ಆದ್ದರಿಂದಲೇ ಇದಕ್ಕೆ ಇನ್ನಿಲ್ಲದ ಮಹತ್ವ. ಬೆಳಿಗ್ಗೆ ೧೦.೩೦ಕ್ಕೆ ವಿಶೇಷ ವಿಮಾನದಲ್ಲಿ ಆಗಮಿಸಲಿರುವ ಶಾ ಅವರು ಬಿವಿಬಿಯಲ್ಲದೇ,ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಕ್ಯಾಂಪಸ್’ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧಿಕೃತವಾಗಿ ಪಾಲ್ಗೊಳ್ಳುವರು.
ನಂತರ ಪಕ್ಷ ಸಂಘಟನೆ ಸಭೆ ನಡೆಸುವರು. ಆಂತರಿಕ ಸಭೆಯಾಗಲಿರುವ ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸೇರಿದಂತೆ ಬಿಜೆಪಿಯ ಎಲ್ಲ ಪ್ರಮುಖರು ಇರಲಿದ್ದಾರೆ.
`ಚುನಾವಣೆ ಎದುರಿಸಲು, ಮುಖ್ಯವಾಗಿ ಇಡೀ ಕಿತ್ತೂರು ನೆಲದಲ್ಲಿ ಕಮಲ ಅರಳಿಸಲು ನಿಮ್ಮ ಬೆನ್ನಿಗಿರುವ ಪೂರಕ ಅಂಶಗಳು ಯಾವವು’ ಎಂಬ ಪ್ರಧಾನ ಪ್ರಶ್ನೆಯೊಂದಿಗೆ ಸಭೆ ನಡೆಯಲಿದೆ. ಹೀಗಾಗಿ ಕಳೆದ ವಾರದವರೆಗೆ ತಣ್ಣಗಿದ್ದ ಇಲ್ಲಿನ ಬಿಜೆಪಿ ವಲಯದಲ್ಲಿ ಬಿಸಿ ಏರಿದೆ.
ಧಾರವಾಡ ಜಿಲ್ಲೆಯ ಏಳರ ಪೈಕಿ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬುದು ಶಾ ಅವರು ಹುಬ್ಬಳ್ಳಿ ಸಭೆಯಲ್ಲಿ ನೀಡಲಿರುವ ಟಾರ್ಗೆಟ್.
ಹುಬ್ಬಳ್ಳಿ ಸಭೆಯ ನಂತರ ಇನ್ನೊಂದು ಹೈವೋಲ್ಟೇಜ್ ಸಭೆ ಎರಡನೇ ವಿಧಾನಸೌಧದ ನೆಲ ಬೆಳಗಾವಿಯಲ್ಲಿ ನಡೆಯಲಿದೆ. ಬೆಂಗಳೂರು ನಂತರ ಅತೀ ಹೆಚ್ಚು ವಿಧಾನಸಭಾ ಕ್ಷೇತ್ರಗಳಿರುವ ಜಿಲ್ಲೆಯಾಗಿರುವ ಇಲ್ಲಿ (೧೮) ಸಿಂಹಪಾಲನ್ನು ಬಿಜೆಪಿ ಪಡೆದುಕೊಳ್ಳಬೇಕು. ಈಗ ಬೆಳಗಾವಿಯ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಇದೆ. ಈ ಸಂಖ್ಯೆ ಶೂನ್ಯಕ್ಕೆ ಕುಸಿಯುವಂತೆ ನೋಡಿಕೊಳ್ಳಿ ಎಂದು ಗೃಹ ಸಚಿವರು ನೀಡಲಿರುವ ಸೂಚನೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಅಧಿಕೃತ ಕಾರ್ಯಕ್ರಮ ಹಾಗೂ ಪಕ್ಷ ಸಭೆಗಳಲ್ಲದೇ ಬೆಳಗಾವಿಯಲ್ಲಿ ಸಾರ್ವಜನಿಕ ರ‍್ಯಾಲಿಯೂ ಏರ್ಪಾಡಾಗಿದೆ. ಇದು ಚುನಾವಣಾ ಭಾಷಣದ ರ‍್ಯಾಲಿ ಎಂಬುದೀಗ ಸುಸ್ಪಷ್ಟವಾಗಿದೆ. ಇದರೊಂದಿಗೆ ಕಾಂಗ್ರೆಸ್‌ಗಿಂತ ಮೊದಲೇ ಬಿಜೆಪಿ ತನ್ನ ರಾಷ್ಟ್ರೀಯ ನಾಯಕರಿಂದ ಈ ಭಾಗದಲ್ಲಿ ಚುನಾವಣಾ ರ‍್ಯಾಲಿ ನಡೆಸಿದಂತಾಗಲಿದೆ.