200 ಕೋಟಿ ಆಸ್ತಿ, 38 ಕೆಜಿ ಚಿನ್ನ, 258 ಕೆಜಿ ಬೆಳ್ಳಿ

Advertisement

ಬಳ್ಳಾರಿ: ಕೆಆರ್‌ಪಿಪಿ ಬಳ್ಳಾರಿ ನಗರ ಕ್ಷೇತ್ರ ಅಭ್ಯರ್ಥಿ ಜನಾರ್ಧನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣ ಸುಮಾರು ೨೦೦ ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿದ್ದಾರೆ. ಬಿಎಸ್‌ಸಿ ಪದವೀಧರೆ ಆಗಿರುವ ಅವರ ಒಟ್ಟಾರೆ ಆಸ್ತಿ ಮೌಲ್ಯ ೧೯೯ ಕೋಟಿ ೬೧ ಲಕ್ಷ ೯೨ ಸಾವಿರದ ೮೫೭ ರೂಪಾಯಿ.
ಸೋಮವಾರ ನಾಮಪತ್ರ ಸಲ್ಲಿಸುವ ವೇಳೆ ನೀಡಿರುವ ಶಪಥ ಪತ್ರದ ಅನ್ವಯ ಅವರು ೯೬ ಕೋಟಿ ೨೩ ಲಕ್ಷ, ೮೯ ಸಾವಿರದ ೩೨೫ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಸ್ಥಿರಾಸ್ತಿ ಮೌಲ್ಯ ೧೦೩ ಕೋಟಿ ೩೮ ಲಕ್ಷ ೩ಸಾವಿರದ ೫೨೩೨ ರೂ.
ಇವರ ಪತಿ ಜನಾರ್ಧನ ರೆಡ್ಡಿ ಬಳಿ ೩೪ ಕೋಟಿ ೬೧ ಲಕ್ಷ, ೬೨ ಸಾವಿರದ ೧೨೭ ರೂಪಾಯಿಯ ಆಸ್ತಿ ಇದೆ.
ಲಕ್ಷ್ಮೀ ಅರುಣ ಅವರ ಬಳಿ ೩೮ ಕೆಜಿ ಮೌಲ್ಯದ ಚಿನ್ನಾಭರಣ ಇವೆ. ೨೫೮ ಕೆಜಿ ಬೆಳ್ಳಿ ಒಡವೆ ವಸ್ತು ಇವೆ. ಜನಾರ್ಧನ ರೆಡ್ಡಿ ಬಳಿ ೪೬.೨೫ ಕೆಜಿ ಚಿನ್ನ ಇದ್ದು, ೧೭೮ ಕೆಜಿ ತೂಕದ ಬೆಳ್ಳಿಯ ಒಡವೆ ಇವರ ಬಳಿ ಇವೆಯಂತೆ.
ಸ್ಥಿರಾಸ್ತಿ ವಿಷಯಕ್ಕೆ ಬಂದರೆ ೭೪ ಕೋಟಿ ೮೯ ಲಕ್ಷ, ೭೨ ಸಾವಿರದ ೧೧ ರೂಪಾಯಿ ಮೌಲ್ಯದ ಆಸ್ತಿಯನ್ನು ಲಕ್ಷ್ಮೀ ಅರುಣ ಹೊಂದಿದ್ದಾರೆ. ನಿವೇಶನ ಯೋಗ್ಯ ಆಸ್ತಿ ಅಂದರೆ ಕೃಷಿಯೇತರ ಭೂಮಿ ಒಟ್ಟಾರೆ ೧೧೫ ಎಕರೆಗೂ ಹೆಚ್ಚಿದೆ. ಎನೋಬಲ್ ಇಂಡಿಯಾದ ವಿವಿಧ ಸಂಸ್ಥೆಗಳಲ್ಲಿ ಲಕ್ಷ ಲಕ್ಷ ರೂ. ಮೌಲ್ಯದ ಶೇರು ಲಕ್ಷ್ಮೀ ಅರುಣ ಅವರ ಹೆಸರಲ್ಲಿ ಇದೆ. ಬಳ್ಳಾರಿ, ಕೊಪ್ಪಳ ಸೇರಿದಂತೆ ವಿವಿಧೆಡೆ ಒಟ್ಟಾರೆ ೬೭.೦೮ ಎಕರೆ ಕೃಷಿ ಭೂಮಿ ಇವರ ಬಳಿ ಇದೆ. ಜನಾರ್ಧನ ರೆಡ್ಡಿ ಬಳಿ ೨೯ ಎಕರೆ ಕೃಷಿ ಭೂಮಿ, ೩ ನಿವೇಶನ ಮಾತ್ರ ಇವೆ.
ವಿಶೇಷ ಅಂದರೆ ಜನಾರ್ಧನ ರೆಡ್ಡಿ ಅಂಚೆ ಉಳಿತಾಯ ಖಾತೆ ತೆರೆದು ಅದರಲ್ಲಿ ೧೦ ಸಾವಿರ ರೂ. ನಿಗದಿತ ಅವಧಿಯ ಠೇವಣಿ ಇಟ್ಟುಕೊಂಡು ಬಂದಿದ್ದಾರೆ. ಇಬ್ಬರೂ ಕೋಟಿ ಕೋಟಿ ಆಸ್ತಿ ಹೊಂದಿದ್ದರೂ ಇವರ ಬಳಿ ಯಾವುದೇ ವಾಹನ ಇಲ್ಲ ಎಂದು ಶಪಥ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇಬ್ಬರೂ ಸಹ ಯಾವುದೇ ಸಾಲ ಮಾಡಿಲ್ಲ.