ಬೆಳಗಾವಿ(ಚಿಕ್ಕೋಡಿ): ಎರಡು ವರ್ಷದ ಮಗುವಿನ ಮೇಲೆ ಸರ್ಕಾರಿ ಬಸ್ ಒಂದು ಹರಿದು ಸ್ಥಳದಲ್ಲೇ ಮಗು ಮೃತಪಟ್ಟಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಪರಮಾನಂದವಾಡಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಶ್ಲೋಕ ಅಶೋಕ ತುಳಸಿಗೇರಿ(2) ಮೃತ ಬಾಲಕ ಎಂದು ಗುರುತಿಸಲಾಗಿದೆ. ಪರಮಾನಂದವಾಡಿಯಿಂದ ರಾಯಬಾಗ ಪಟ್ಟಣಕ್ಕೆ ತೆರಳುತ್ತಿದ್ದ ಬಸ್ ಇದಾಗಿದ್ದು, ಮಧ್ಯಾಹ್ನ ೧.೩೦ರ ಸುಮಾರಿಗೆ ಮನೆಯ ಮುಂದೆ ಆಟವಾಡುತ್ತ ಮಗು ರಸ್ತೆಗೆ ಹೋಗಿದೆ. ಈ ವೇಳೆ ರಾಯಬಾಗದಿಂದ ಸಿದ್ದಾಪುರಕ್ಕೆ ಹೊರಟಿದ್ದ ಬಸ್ ಹಾಯ್ದು ಪರಿಣಾಮ ಮಗು ಚಕ್ರದಡಿ ಸಿಲುಕಿ ಅಪ್ಪಚ್ಚಿಯಾಗಿದೆ. ಸ್ಥಳದಲ್ಲಿ ರಕ್ತದ ಮಡುವಿನಲ್ಲಿ ಬಿದ್ದ ಮಗುವನ್ನು ಕಂಡು ಸಂಬಂಧಿಕರ ಆಕ್ರಂದನ ಮುಗಿಲುಮುಟ್ಟಿತ್ತು.
ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಸರ್ಕಾರಿ ಬಸ್ಸಿನ ಗಾಜುಗಳನ್ನು ಪುಡಿಪುಡಿ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗುತ್ತಿದ್ದಂತೆ ಸ್ಥಳಕ್ಕೆ ಕುಡಚಿ ಪೊಲೀಸರು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರು.