ಹಾವೇರಿ: ಈವರೆಗೆ ನಡೆದಿರುವ ಸಮೀಕ್ಷೆಗಳಲ್ಲಿ ಬಿಜೆಪಿಗೆ ಜಯ ದೊರೆಯಲಿದೆ ಎಂದು ವರದಿಗಳು ತಿಳಿಸಿದ್ದು, ಮೇ 10ನೇ ತಾರೀಖು ನಡೆಯುವ ಮತದಾನದಂದು 130 ಸ್ಥಾನಗಳಲ್ಲಿ ಬಿಜೆಪಿ ಮುಂದಿರಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಶಿಗ್ಗಾಂವ-ಸವಣೂರು ವಿಧಾನಸಭಾ ಕ್ಷೇತ್ರದಲ್ಲಿ ಕಾರಡಗಿ, ಹುರುಳಿಕೊಪ್ಪಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನಿಂದ ಹಲವಾರು ಜನ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಬಾರಿ ಅತಿ ಹೆಚ್ಚು ಅಭಿವೃದ್ಧಿ ಕೆಲಸಗಳು ಆಗಿವೆ. ನಮ್ಮ ಕೆಲಸ ಮಾತಾಡಬೇಕು. ನಮ್ಮ ಕೆಲಸ ನೋಡಿ ಜನ ಮತ ಕೊಡಬೇಕಿದೆ ಎಂದರು.
ವಿರೋಧ ಪಕ್ಷದವರು ಮನ ಬಂದಂತೆ ಮಾತನಾಡುತ್ತಾರೆ. ಯಾರು ಅಭಿವೃದ್ಧಿ ಮಾಡಿದ್ದಾರೆ ಎನ್ನುವುದು ಜನರಿಗೆ ತಿಳಿದಿದೆ ಎಂದರು. ಮಾಜಿ ಶಾಸಕ ಮಂಜುನಾಥ್ ಕುನ್ನೂರು ಅವರು 2000 ಇಸವಿಯಲ್ಲಿ ಮಂಜೂರು ಮಾಡಿದ್ದನ್ನು ಈಗ ತಿಳಿಸುತ್ತಾರೆ ಎಂದರು. ಕೆಲವರು ಹೊರಗಿನ ತಾಲೂಕಿನಿಂದ ಚುನಾವಣೆಗೆ ಬರುತ್ತಾರೆ. ಚುನಾವಣೆ ಆದ ಮೇಲೆ ಅವರು ಬರಲ್ಲ, ಕಷ್ಟ ಸುಖ ಕೇಳುವುದಿಲ್ಲ. ಹಾಲಿನಲ್ಲಿ ಉಪ್ಪು ಹಾಕೋಕೆ ಬರುತ್ತಾರೆ. ಇಂಥವರ ಮಾತು ಕೇಳಬೇಡಿ ಎಂದರು.