೨೯ನೇ ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನ

Advertisement

ಹುಬ್ಬಳ್ಳಿ: ಅಖಿಲ ಭಾರತ ಮಾಧ್ವ ಮಹಾಮಂಡಳವು ೨೯ನೇ ಅಖಿಲ ಭಾರತ ಮಾಧ್ಯ ತತ್ವಜ್ಞಾನ ಸಮ್ಮೇಳನ ಸೆ.೧೭ ಮತ್ತು ೧೮ರಂದು ಇಲ್ಲಿನ ಕುಸುಗಲ್ ರಸ್ತೆಯ ಶ್ರೀನಿವಾಸ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದೆ ಎಂದು ಮಹಾಮಂಡಳದ ಪ್ರಧಾನ ಕಾರ್ಯದರ್ಶಿ ಶ್ರೀಪಾದ ಸಿಂಗನಮಲ್ಲಿ ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಮಧ್ವಾಚಾರ್ಯರು ಬೋಧಿಸಿದ ಮಾಧ್ವ ತತ್ವಗಳನ್ನು ಪ್ರಚಾರಪಡಿಸಲು ಮತ್ತು ಅವುಗಳ ಬೆಳಕಿನಲ್ಲಿ ಬದುಕನ್ನು ಹಸನುಗೊಳಿಸಲು ಉಡುಪಿಯ ಪೇಜಾವರ ಅಧೋಕ್ಷಜ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರು ಅಖಿಲ ಭಾರತ ಮಾಧ್ವ ತತ್ವಜ್ಞಾನ ಸಮ್ಮೇಳನವನ್ನು ೧೯೫೩ರಲ್ಲಿ ಸಂಘಟಿಸಿದ್ದರು. ಅವರ ನೇತೃತ್ವದಲ್ಲಿ ಇದುವರೆಗೆ ೨೮ ಸಮ್ಮೇಳನಗಳು ನಡೆದಿವೆ. ಈಗ ೨೯ನೇ ಸಮ್ಮೇಳನವು ಉಡುಪಿ ಪೇಜಾವರಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ನೇತೃತ್ವದಲ್ಲಿ ಸಂಘಟಿಸಲಾಗಿದೆ. ಈ ಸಮ್ಮೇಳನದ ಎಲ್ಲ ಕಾರ್ಯಕ್ರಮಗಳಲ್ಲಿಯೂ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಇದ್ದು, ಅನುಗ್ರಹಿಸಲಿದ್ದಾರೆ ಎಂದು ಹೇಳಿದರು.
ಎರಡು ದಿನ ನಡೆಯುವ ಈ ಸಮ್ಮೇಳನದಲ್ಲಿ ಮುಂಜಾನೆಯಿAದ ಸಂಜೆಯವರೆಗೂ ವಿದ್ವತ್ ಗೋಷ್ಠಿಗಳು, ಸಂಗೀತ, ದಾಸವಾಣಿ, ಭಜನೆ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ಶ್ರೀಮನ್ ನ್ಯಾಯ ಸುಧಾ ಮಂಗಳ ಮಹೋತ್ಸವವೂಜರುಗಲಿರುವುದು ವಿಶೇಷವಾಗಿದೆ. ನಾಡಿನ ವಿವಿಧ ಮಠಗಳ ಹತ್ತಕ್ಕೂ ಹೆಚ್ಚು ಯತಿಗಳು ಮತ್ತು ಪ್ರಸಿದ್ಧ ವಿದ್ವಾಂಸರು, ಜನಪ್ರತಿನಿಧಿಗಳು, ಪ್ರವಚನಕಾರರು ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.