ಹೋದಕಡೆಯಲ್ಲೆಲ್ಲ ಅಭ್ಯರ್ಥಿಗಳ ಘೋಷಣೆ ಸರಿಯಲ್ಲ: ಸತೀಶ ಜಾರಕಿಹೊಳಿ

Advertisement

ಕೊಪ್ಪಳ(ಕುಷ್ಟಗಿ): ಹೋದಕಡೆಗಳಲ್ಲೆಲ್ಲಾ ಸಿದ್ದರಾಮಯ್ಯ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದು ಸರಿಯಲ್ಲ. ಇದರಿಂದ ಅರ್ಜಿ ಹಾಕಿದವರಿಗೆ ತೊಂದರೆ ಆಗುತ್ತದೆ ಎಂದು ಮಾಜಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರ್ಜಿ ಹಾಕಿದವರಿಗೆ ನಮಗೂ ಟಿಕೆಟ್ ಸಿಗುತ್ತದೆ ಎಂಬ ಆಸೆ ಇರುತ್ತದೆ. ಆದರೆ ಏಕಾಏಕಿ ಟಿಕೆಟ್ ಘೋಷಣೆ ಮಾಡುವುದರಿಂದ ಅರ್ಜಿ ಹಾಕಿದವರಿಗೆ ತೊಂದರೆ ಆಗುತ್ತದೆ ಎಂದರು.
ಒಂದು ಕಡೆ ಅರ್ಜಿಗಳ ಇತ್ಯರ್ಥವಾಗಿಲ್ಲ. ಮತ್ತೊಂದು ಕಡೆ ಇವರಿಗೆ ಮತ ಹಾಕಿ ಎನ್ನುವುದು ಸರಿಯಲ್ಲ. ಹಾಗಾದರೇ ಸಿದ್ದರಾಮಯ್ಯ ಹೆಸರು ಘೋಷಣೆ ಮಾಡಿದ್ದು, ತಪ್ಪು ಅಂತಿರಾ ಎಂಬ ಪ್ರಶ್ನೆಗೆ ಉತ್ತರಿಸದ ಸತೀಶ ಜಾರಕಿಹೊಳಿ ನಾನು ತಪ್ಪು ಅನ್ನಬೇಕು, ನೀವು ಅಲ್ಲಿ ಮತ್ತೇನಾದರೂ ಟ್ವಿಸ್ಟ್ ಮಾಡಿ ಹಾಕಬೇಕು. ಇದೆಲ್ಲ ಸರಿ ಇರಲ್ಲ ಎಂದು ಸುಮ್ಮನಾದರು.
ಬೆಳಗಾವಿ ಗಡಿ ವಿವಾದ ವಿಚಾರವು ಇದು ಒಂದು ರೀತಿ ವರ್ಷಕ್ಕೊಮ್ಮೆ ಮಳೆ ಬಂದ ಹಾಗೆ ಬರುತ್ತದೆ‌. ಚುನಾವಣೆ ಬಂದಾಗಲೆಲ್ಲಾ ಗಡಿ ವಿವಾದ ಹುಟ್ಟಿಕೊಳ್ಳುತ್ತದೆ ಎಂದು ಸತೀಶ ಜಾರಕಿಹೊಳಿ ಕಿಡಿಕಾರಿದರು.