ಹೊಸ ವರ್ಷಾಚರಣೆಗೆ ಬಿಗಿ ಭದ್ರತೆ

POLICE
Advertisement

ಬೆಂಗಳೂರು: ಕೊರೊನಾ ಸೋಂಕಿನಿಂದಾಗಿ ಕಳೆದ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಮತ್ತೆ ಹೊಸ ವರ್ಷಾಚರಣೆಗೆ ಅವಕಾಶ ಲಭಿಸಿದ್ದು, ನೂತನ ವರ್ಷಾಚರಣೆಯ ಸಂದರ್ಭದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ನಗರದಾದ್ಯಂತ ಬಿಗಿ ಭದ್ರತೆ ಒದಗಿಸಲು ಖಾಕಿಪಡೆ ಸರ್ವ ರೀತಿಯಲ್ಲೂ ಸನ್ನದ್ಧವಾಗಿದೆ. ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಮತ್ತು ನಗರ ಸಂಚಾರಿ ಪೊಲೀಸ್ ಆಯುಕ್ತ ಎಂ.ಎ.ಸಲೀಂ ಅವರು ನೂತನ ವರ್ಷಾಚರಣೆಗೂ ಮುನ್ನ ಕೈಗೊಳ್ಳಲಿರುವ ಕಾನೂನು ಸುವ್ಯವಸ್ಥೆ ಮತ್ತು ಭದ್ರತಾ ಕ್ರಮಗಳ ಕುರಿತಾಗಿ ಸವಿವರಗಳನ್ನು ಒದಗಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು, ಹೊಸ ವರ್ಷದ ಸಂಭ್ರಮಾಚರಣೆಯ ಹಿನ್ನೆಲೆ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳೆಂದು ವಿವಿಧ ಹಂತದ ಒಟ್ಟು 8500 ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ನಗರದಲ್ಲಿ ಒಂದು ಲಕ್ಷ ಎಪತ್ತು ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಅಹಿತಕರ ಘಟನೆಗಳೇನಾದರೂ ನಡೆದಲ್ಲಿ ನಮ್ಮ ಅತ್ಯಾಧುನಿಕ ಕೆಮರಾದಲ್ಲಿ ಸೆರೆ ಸಿಕ್ಕ ದೃಶ್ಯಗಳನ್ನು ಆಧರಿಸಿ ಕೃತ್ಯಕ್ಕೆ ಕಾರಣರಾದವರನ್ನು ಹೆಡೆಮುರಿ ಕಟ್ಟಲಾಗುತ್ತದೆ. ಈ ನಿಟ್ಟಿನಲ್ಲಿ ಸಿಸಿಟಿವಿಗಳು ಹೆಚ್ಚುವರಿಯಾಗಿ ಬಳಕೆ ಆಗುತ್ತವೆ ಎಂದರು.
ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಈ ಬಾರಿ ವಿಶೇಷ ಒತ್ತು ಕೊಡಲಾಗಿದೆ. ಪಬ್, ಬಾರ್ ಅಂಡ್ ರೆಸ್ಟೋರೆಂಟ್‌ಗಳಿಗೆ ಪ್ರವೇಶಿಸುವ ಪ್ರತಿಯೊಬ್ಬರೂ ತಮ್ಮ ಮುಖಕ್ಕೆ ಧರಿಸಿದ ಮಾಸ್ಕ್ ತೆಗೆದು ಅಲ್ಲಿ ಅಳವಡಿಸಲಾಗಿರುವ ಸಿಸಿ ಕೆಮರಾಗಳಿಗೆ ಕಡ್ಡಾಯವಾಗಿ ಮುಖವನ್ನು ತೋರಿಸಬೇಕು. ಇಂಥ ಫುಟೇಜ್‌ ಅನ್ನು ಸಂಗ್ರಹ ಮಾಡಿ ಇಡಬೇಕೆಂದು ಎಲ್ಲ ಹೋಟೆಲ್ ಮಾಲೀಕರುಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಇನ್ನು ಹೊಸ ವರ್ಷಾಚರಣೆಯ ದಿನದಂದು ಡಿ.31ರ ರಾತ್ರಿ 1 ಗಂಟೆಯವರೆಗೆ ಮಾತ್ರ ಪಾರ್ಟಿ ನಡೆಸಲು ಅನುಮತಿ ನೀಡಲಾಗಿದೆ. ಶಬ್ದ ಮಾಲಿನ್ಯವನ್ನು ತಡೆಗಟುವ ನಿಟ್ಟಿನಲ್ಲಿ ಕ್ರಮ ಕೋಗೊಳ್ಳಲಾಗಿದ್ದು ಲೌಡ್‌ಸ್ಪೀಕರ್ ಬಳಸುವವರು ಸಾಕಷ್ಟು ಮುನ್ನವೇ ಅನುಮತಿಯನ್ನು ಪಡೆದಿರಬೇಕು. ಜೊತೆಗೆ 12 ಗಂಟೆಯ ನಂತರ ಯಾರೇ ಆಗಲಿ ಲೌಡ್‌ಸ್ಪೀಕರ್ ಬಳಸುವಂತಿಲ್ಲ. ಈ ಎಲ್ಲ ಮಾರ್ಗಸೂಚಿ ನಿಯಮಗಳ ಕಟ್ಟುನಿಟ್ಟಿನ ಪಾಲನೆ ಬಗ್ಗೆ ನಿಗಾ ವಹಿಸಲು ನಮ್ಮ ಪೊಲೀಸ್ ಸಿಬ್ಬಂದಿ ಮಫ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಹೊಸ ವರ್ಷಾಚರಣೆಯ ದಿನದಂದು ನಗರದಾದ್ಯಂತ ಸೂಕ್ಷ್ಮ ಪ್ರಧೇಶಗಳಲ್ಲಿ 20 ಕ್ಕೂ ಅಧಿಕ ಡ್ರೋಣ್ ಕೆಮೆರಾಗಳು ಕಾರ್ಯನಿರ್ವಹಿಸುತ್ತವೆ. ರಸ್ತೆಯ ಎರಡು ಬದಿಗಳಲ್ಲಿ ಮೆಟಲ್ ಡಿಟೆಕ್ಟರ್ ಹಾಕಲಾಗುವುದು.
ಹೊಸ ವರ್ಷದ ಸಲುವಾಗಿ ನಡೆಸಲಾಗುವ ಪಾರ್ಟಿಗಳಲ್ಲಿ ಭಾಗಿಯಾದವರಿಗೆ ನಶೆ ಹೆಚ್ಚಾಗಿ ಆರೋಗ್ಯ ಸಮಸ್ಯೆ ಉಂಟಾದಲ್ಲಿ ಅಂಥವರನ್ನು ಪೊಲೀಸ್ ಠಾಣೆಯ ಬದಲಿಗೆ ಆಸ್ಪತ್ರೆಗಳಿಗೆ ಕರೆದೊಯ್ಯಲಾಗುತ್ತದೆ. ಈ ಹಿನ್ನೆಲೆ ಈಗಾಗಲೇ ಕೆಲ ಆಸ್ಪತ್ರೆಗಳನ್ನು ಸಿದ್ಧಗೊಳಿಸಲಾಗಿದೆ. ಇನ್ನು, ನೂತನ ವರ್ಷದ ದಿನ ಯಾರೂ ಕೂಡ ಲೈಸೆನ್ಸ್ ಹೊಂದಿದ್ದರೂ ಕೂಡ ಯಾವುದೇ ಶಸ್ತ್ರಾಸ್ತ್ರಗಳನ್ನು ತರುವಂತಿಲ್ಲ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸಂಚಾರ ವಿಭಾಗದ ವಿಶೇಷ ಆಯುಕ್ತ ಸಲೀಂ ಅವರು, ನೂತನ ವರ್ಷಆಚರಣೆಯ ಹಿನ್ನೆಲೆ ವಾಹನ ಸವಾರರ ಸುರಕ್ಷತಾ ದೃಷ್ಟಿಯಿಂದ ಬೆಂಗಳೂರಿನ ಮೂವತ್ತು ಮೇಲ್ಸೇವೆಗಳ ಸಂಚಾರವನ್ನು ಅಂದು ರಾತ್ರಿ 9 ಗಂಟೆಯ ನಂತರ ಸಂಪೂರ್ಣವಾಗಿ ಬಂದ್ ಮಾಡಲಾಗುತ್ತದೆ ಎಂದರು.
ನೈಸ್ ರಸ್ತೆಯಲ್ಲಿ ಡಿ.31 ರಂದು ರಾತ್ರಿ 9 ಗಂಟೆಯ ಬಳಿಕ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ. ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವವರ ಒಂದು ಕಣ್ಣಿಡಲಾಗುತ್ತಿದ್ದು ಅಂದು ನೂರಕ್ಕೆ ನೂರರಷ್ಟು ನಮ್ಮ ಸಂಚಾರಿ ಪೊಲೀಸ್ ಸಿಬ್ಬಂದಿ ವಾಹನ ಸವಾರರನ್ನು ತಪಾಸಣೆ ನಡೆಸುತ್ತಾರೆ. ಅತಿ ವೇಗದ, ಅಜಾಗರೂಕತೆಯ ಮತ್ತು ಕುಡಿದ ಮತ್ತಿನಲ್ಲಿ ವಾಹನ ಚಲಾಯಿಸುವುದನ್ನು ನಿಯಂತ್ರಿಸಲು ಜೊತೆಗೆ ವಾಹನ ಸವಾರರ ಪ್ರಾಣ ರಕ್ಷಣೆ ಮಾಡುವ ಉದ್ದೇಶದಿಂದ ಈ ಎಲ್ಲ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು ಸಾರ್ವಜನಿಕರು ಇದಕ್ಕೆ ಸಹಕಾರ ನೀಡಬೇಕೆಂದು ಇದೇ ವೇಳೆ ಅವರು ಮನವಿ ಮಾಡಿಕೊಂಡರು. ಹೆಚ್ಚುವರಿ ಪೊಲೀಸ್ ಆಯುಕ್ತರಾದ ಸುಬ್ರಮಣ್ಯೇಶ್ವರ ರಾವ್, ಸಂದೀಪ್ ಪಾಟೀಲ್, ಅನುಚೇತ್ ಅವರು ಉಪಸ್ಥಿತರಿದ್ದರು.


637 ಆರೋಪಿಗಳ ಬಂಧನ:
ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾದ ಪೊಲೀಸ್ ಕಾರ್ಯಾಚರಣೆಯಲ್ಲಿ ಡ್ರಗ್ಸ್ಗೆ ಸಂಬಂಧಿಸಿದಂತೆ ಒಟ್ಟು 637 ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 547 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಈ ಪೈಕಿ ಆರು ಮಂದಿ ಆರೋಪಿಗಳು ವಿದೇಶಿ ಡ್ರಗ್ಸ್ ಪೆಡ್ಲರ್‌ಗಳಾಗಿದ್ದಾರೆ. ಬಂಧಿತರಿಂದ 345 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳಿಂದ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು ತಿಳಿಸಿದರು.
ಹೊಸ ವರ್ಷಾಚರಣೆ ಸಂದರ್ಭದಲ್ಲಿ ಆದಷ್ಟು ಜನರು ಸಾರ್ವಜನಿಕ ವಾಹನಗಳನ್ನು ಬಳಸುವುದು ಸೂಕ್ತ. ಅಂದು ಬಿಎಂಟಿಸಿ ಬಸ್ಸು, ಮೆಟ್ರೋ ಸೇವೆ ತಡರಾತ್ರಿಯವರೆಗೂ ಲಭ್ಯವಿದ್ದು, ಮಹಿಳೆಯರ ಸುರಕ್ಷತಾ ದೃಷ್ಟಿಯಿಂದ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ.