ಪಣಜಿ: ಹಳೆಯ ವರ್ಷಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಲು ಚಿತ್ರರಂಗ, ಉದ್ಯಮ, ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳ ಪ್ರಮುಖರ ಜತೆಗೆ ದೇಶ-ವಿದೇಶದ ಪ್ರವಾಸಿಗರು ಗೋವಾ ಪ್ರವೇಶಿಸಿದ್ದಾರೆ. ಇದರಿಂದಾಗಿ ಪಣಜಿ, ಮ್ಹಾಪ್ಸಾ, ಪರ್ವರಿ ಮುಂತಾದ ಕರಾವಳಿ ನಗರಗಳಲ್ಲಿ ಶನಿವಾರ ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ಉಂಟಾಗಿತ್ತು.
ಮಹಾರಾಷ್ಟç-ಕರ್ನಾಟಕ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಗೋವಾ ಪ್ರವೇಶಿಸಿವೆ. ರಾಜ್ಯದ ಕೆಲವೆಡೆ ರಸ್ತೆ ದುರಸ್ತಿ ಕಾಮಗಾರಿ ನಡೆಯುತ್ತಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ಸಂಚಾರ ದಟ್ಟಣೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ಸನ್‌ಬರ್ನ್ಗೆ ಹೋಗುವ ವಾಗತೋರ್ ರಸ್ತೆಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿತ್ತು.
ಕಲಂಗುಟ್, ಬಾಗಾ, ಮೋರ್ಜಿ, ಹರ್ಮಲ್, ಶಿವೋಲಿ, ಅಶ್ವೆ ಮುಂತಾದ ರಸ್ತೆಗಳಲ್ಲಿ ತಲಾ ೨ ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಟ್ರಾಫಿಕ್ ಪೊಲೀಸರಿದ್ದರೂ ಸಂಚಾರ ಅಸ್ತವ್ಯಸ್ತವಾಗಿತ್ತು. ರಾಜ್ಯದ ವಿವಿಧ ಕಡಲತೀರಗಳು, ಹೋಟೆಲ್‌ಗಳು ಮತ್ತು ಕ್ಯಾಸಿನೊ ಹಡಗುಗಳೊಂದಿಗೆ ನದಿ ವಿಹಾರಗಳಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮದ್ಯದಂಗಡಿಗಳಲ್ಲೂ ಖರೀದಿ ಭರಾಟೆ ಕಂಡು ಬರುತ್ತಿದೆ. ಹಾಗಾಗಿ ರಾಜ್ಯದ ಎಲ್ಲಾ ಪ್ರವಾಸಿ ಸ್ಥಳಗಳು ಜನದಟ್ಟಣೆಯಿಂದ ಕೂಡಿವೆ. ಹೊಸ ವರ್ಷವನ್ನು ಸ್ವಾಗತಿಸಲು ಪಾರ್ಟಿಗಳು, ದೊಡ್ಡ ಔತಣಕೂಟ ಆಯೋಜಿಸಲಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣವಿದೆ.