ಸಾರ್ವಜನಿಕ ಕುಲುಮೆಯಲ್ಲಿ ಜನತಂತ್ರ ಪದ್ಧತಿಯ ಮೂಲಕ ನಡೆಯುವ ಮತಮಾಪನದ ಮುಖ್ಯ ಉದ್ದೇಶ ಭವಿಷ್ಯ ಭಾರತದ ರೂಪುರೇಷೆಯನ್ನು ಮತ್ತಷ್ಟು ವ್ಯಾಪಕವಾಗಿ ಗಟ್ಟಿಗೊಳಿಸಲು ಅಗತ್ಯವಾದ ಜನಾದೇಶದ ಬ್ರಹ್ಮಾಸ್ತ್ರವನ್ನು ಮತಪೆಟ್ಟಿಗೆ ಎಂಬ ರಜತ ಪಾತ್ರೆಯಲ್ಲಿ ಧಾರೆ ಎರೆದುಕೊಡುವ ಕೈಂಕರ್ಯ ಹಲವು ಹತ್ತು ದೃಷ್ಟಿಕೋನದಿಂದ ತತ್ವಾಧಾರಿತ ಹಾಗೂ ಸತ್ವಾಧಾರಿತ ಅಂಶಗಳಿಂದ ಕೂಡಿದೆ ಎಂಬುದನ್ನು ಮನಗಂಡರಷ್ಟೆ ಮತದಾನದ ಪಾವಿತ್ರ್ಯ ಏನೆಂಬುದನ್ನು ಅರಿಯಲು ಸಾಧ್ಯ. ರಾಷ್ಟ್ರಮಟ್ಟದಲ್ಲಿ ಲೋಕಸಭಾ ಚುನಾವಣೆಗೆ ಶುಕ್ರವಾರ ನಡೆಯಲಿರುವ ಮೂರನೆಯ ಹಂತ ಹಾಗೂ ಕರ್ನಾಟಕಕ್ಕೆ ಮೊದಲ ಹಂತವಾಗಿರುವ ಈ ಮತದಾನದ ಪ್ರಕ್ರಿಯೆ ನಿರ್ಣಾಯಕ ಎಂದು ಪರಿಭಾವಿಸದೆ ಇರುವ ಕಾರಣವೆಂದರೆ ಈ ಚುನಾವಣೆಗೆ ಸಂಬಂಧಿಸಿದಂತೆ ನಡೆಯುವ ಮತದಾನದ ಕ್ಷೇತ್ರಗಳು ಹಾಗೂ ಆ ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಅತಿರಥ ಮಹಾರಥರು. ಕರ್ನಾಟಕಕ್ಕೆ ಸೀಮಿತವಾಗಿ ಹೇಳುವುದಾದರೆ ಮೊದಲನೆಯ ಹಂತದ ಮತದಾನದಲ್ಲಿ ೧೪ ಲೋಕಸಭಾ ಕ್ಷೇತ್ರಗಳು ಹಳೆ ಮೈಸೂರು, ಕರಾವಳಿ ಹಾಗೂ ಮಲೆನಾಡಿನ ಕ್ಷೇತ್ರಗಳಲ್ಲಿ ಬಹುತೇಕ ಹೊಸ ಮುಖಗಳು ಕಣದಲ್ಲಿರುವುದು ಕುತೂಹಲಕ್ಕೆ ಗ್ರಾಸ ಒದಗಿಸಿರುವುದು ನಿಜ. ಇದಲ್ಲದೆ ಅಭ್ಯರ್ಥಿಗಳ ಕ್ಷೇತ್ರ ಬದಲಾವಣೆ ಹಾಗೂ ವಿಧಾನಸಭೆಗೆ ಸೀಮಿತವಾಗಿದ್ದವರು ಲೋಕಸಭೆ ಕಣ ಪ್ರವೇಶಿಸಿರುವುದರಿಂದ ತಲೆದೋರಿರುವ ಕಳವಳ ಹಾಗೂ ತಳಮಳದ ವಾತಾವರಣದ ಪರಿಣಾಮ ಏನೆಂಬುದನ್ನು ಕಾದುನೋಡುವುದು ಸೂಕ್ತ. ಚುನಾವಣೆಯ ನಂತರ ಬದಲಾವಣೆಯನ್ನು ನಿರೀಕ್ಷಿಸುವುದು ಸಹಜ. ಈ ಚುನಾವಣೆ ಲೋಕಸಭೆ ರಚನೆಗೆ ಸಂಬಂಧಿಸಿದ್ದು. ಕರ್ನಾಟಕಕ್ಕೆ ನೇರವಾಗಿ ಸಂಬಂಧಿಸಿದ್ದಲ್ಲ. ಆದರೆ, ಅನುಶಂಗಿಕ ಪರಿಣಾಮವಾವನ್ನು ತಳ್ಳಿಹಾಕಲು ಬರುವುದಿಲ್ಲ. ಏಕೆಂದರೆ, ರಾಜಕೀಯವೆಂಬುದು ಗಣಿತ ಶಾಸ್ತ್ರ ಆಧರಿಸಿದ್ದಲ್ಲ. ಸಮಾಜಶಾಸ್ತ್ರದ ವಿಸ್ತರಣೆಯ ಭಾಗವಾದ ಭಾವಕೋಶದ ಮೂಲಕ ಅರಳುವ ಈ ಜೀವವಿಜ್ಞಾನ ಪರಿಣಾಮಕ್ಕಿಂತಲೂ ಹೊಸತನ್ನು ಸೃಷ್ಟಿಸುವ ಕಡೆಯೇ ಅದರ ಆಸಕ್ತಿ.
ದೇಶ ಕಟ್ಟುವ ವಿಚಾರ ಮತದಾರರಿಗೆ ಯಾವತ್ತಿಗೂ ಮುಖ್ಯವಾಗಿರಬೇಕು. ಹಾಗಿದ್ದರಷ್ಟೆ ಮತಕ್ಕೆ ಹಾಗೂ ಮತದಾನಕ್ಕೆ ಒಂದು ಖಚಿತ ಗೊತ್ತು ಗುರಿ. ನಾವು ಆರಿಸುವ ಸಂಸದ ತನ್ನ ಜವಾಬ್ದಾರಿ ನಿರ್ವಹಣೆಯ ಮೂಲಕ ಸಾಮಾಜಿಕ ಅಸಮತೆಯನ್ನು ನೀಗುವ ಜೊತೆಗೆ ಬೆರೆತ ಜೀವದಂತಹ ವಾತಾವರಣವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಒಳಗೊಂಡಿದ್ದಾನೆಯೇ ಎಂಬುದನ್ನು ಖಚಿತಪಡಿಸಿಕೊಂಡ ಮೇಲೆ ಇಂತಹ ಸಂಸದ ಪ್ರತಿನಿಧಿಸುವ ರಾಜಕೀಯ ಪಕ್ಷದ ವೈಚಾರಿಕ ಬದ್ಧತೆ ಹಾಗೂ ಅದರ ಪೂರ್ವಾಪರಗಳನ್ನು ತಾಳೆ ನೋಡಿ ಮತದಾನ ಮಾಡಿದಾಗ ನಿಜಕ್ಕೂ ದೇಶದ ಮರು ನಿರ್ಮಾಣದ ಕಾಯಕ ಮೌನಕ್ರಾಂತಿಯ ರೀತಿಯಲ್ಲಿ ಆಗಲು ಸಾಧ್ಯ. ಭಾರತದ ಮತದಾರರಿಗೆ ರಾಜಕೀಯ ಪ್ರಬುದ್ಧತೆ ಇರಬಹುದು. ಆದರೆ, ರಾಜಕೀಯ ಅರಿವು ಕಡಿಮೆ ಎಂಬುದು ತಜ್ಞರ ಲೆಕ್ಕಾಚಾರ. ಏಕೆಂದರೆ, ಭಾವನಾತ್ಮಕ ವಿಚಾರಗಳಿಗೆ ಶರಣಾಗಿ ಆರಾಧನಾ ಗುಣವನ್ನು ಬೆಳೆಸಿಕೊಂಡ ಮೇಲೆ ವ್ಯಕ್ತಿಯೊಬ್ಬನಿಗೆ ವಿವೇಚನೆಯ ಸಾಮರ್ಥ್ಯ ಕುಂದುವುದು ಸ್ವಾಭಾವಿಕ. ಯಾವುದು ವಾಸ್ತವ ಯಾವುದು ಭಾವನಾತ್ಮಕ ಎಂಬುದರ ವಿವೇಚನಾತ್ಮಕ ನಿರ್ಣಯ ಕೈಗೊಳ್ಳುವುದು ಕಷ್ಟವಾದಾಗ ಜನಸಮೂಹದಲ್ಲಿ ಅರಿತವರ ವಿವೇಕದ ನುಡಿಗಳನ್ನು ಆಧರಿಸಿ ನಿರ್ಧಾರ ಕೈಗೊಳ್ಳುವುದು ಒಂದರ್ಥದಲ್ಲಿ ಸರಿಯೇ. ಆದರೆ, ಇದ್ಯಾವ ಪ್ರಕ್ರಿಯೆಯನ್ನು ನಡೆಸದೆ ಮತಗಟ್ಟೆಗೆ ತೆರಳಿ ಯಾರೋ ಒಬ್ಬರಿಗೆ ಮತ ಚಲಾಯಿಸುವುದರಿಂದ ಉದ್ದೇಶವೇ ನಿರರ್ಥಕವಾಗುವ ಅಪಾಯವಿರುತ್ತದೆ. ಮತದಾನ ಮಾಡಿ ನಿರರ್ಥಕಗೊಳಿಸುವ ವಿಧಾನ ಒಂದಾದರೆ ಮತದಾನದಿಂದ ದೂರ ಉಳಿದು ಕೇವಲ ಬಾಯಿ ಮಾತಿನಲ್ಲಿಯೇ ಮಂಟಪಗಳನ್ನು ಕಟ್ಟುವ ಉತ್ತರ ಕುಮಾರನ ಪೌರುಷವನ್ನು ನಾಚಿಸುವ ಮತದಾರ ಪ್ರಭುಗಳು ನಿಜವಾದ ಅರ್ಥದಲ್ಲಿ ಜನತಂತ್ರ ಹಾಗೂ ಜನರ ಸ್ಪಷ್ಟ ವೈರಿಗಳು. ಏಕೆಂದರೆ ಇವರಿಗೆ ಬೇಕಾದದ್ದು ಜವಾಬ್ದಾರಿ ಇಲ್ಲದ ಸುಖ. ಮತದಾನವೆಂಬುದು ಸಂವಿಧಾನದ ಮೂಲಕ ದೇಶ ಕೊಟ್ಟಿರುವ ಒಂದು ಜವಾಬ್ದಾರಿ. ಇದರ ನಿರ್ವಹಣೆಯನ್ನು ಬಾಯಿ ಮಾತಿನಲ್ಲಿಯೇ ತೀರಿಸಿಕೊಳ್ಳುವ ಚಪಲಚನ್ನಿಗರಾಯರಿಗೆ ಬುದ್ಧಿ ಬಂದರೆ ದೇಶದ ಕಲ್ಯಾಣ ಸುಸೂತ್ರ.
ವಿದ್ಯುನ್ಮಾನ ಮತದಾನ ಪದ್ಧತಿಯಲ್ಲಿ ವಿಶ್ವಾಸವಿಟ್ಟು ಮತ ಚಲಾಯಿಸುವುದು ನಮ್ಮೆಲ್ಲರ ಕರ್ತವ್ಯ. ಅನುಮಾನದ ಪಿಶಾಚಿಗಳಿಗೆ ಕಿವಿಗೊಡಬಾರದು. ಇದನ್ನು ನೋಡಿಕೊಳ್ಳಲು ಚುನಾವಣಾ ಆಯೋಗ ಸೇರಿದಂತೆ ಹಲವಾರು ಕಣ್ಗಾವಲು ಪ್ರಾಧಿಕಾರಗಳಿರುವಾಗ ಅಕ್ರಮಗಳ ಬಗ್ಗೆ ತಲೆಕೆಡಿಸಿಕೊಳ್ಳುವುದು ಅನಗತ್ಯ. ರಾಷ್ಟ್ರವೆಂಬುದು ಕೇವಲ ಮಣ್ಣು ಕಲ್ಲಲ್ಲ-ಚರಿತ್ರೆ, ಭೂಗೋಳ ಹಾಗೂ ಪುರಾಣ ಪುಣ್ಯ ಕಥೆಗಳೂ ಅಲ್ಲ. ಇವೆಲ್ಲವೂಗಳ ಜೊತೆ ನಿಕಟ ಸಾತತ್ಯ ಹಾಗೂ ಸಾಂಗತ್ಯ ಹೊಂದಿರುವ ಮನಸ್ಸುಳ್ಳ ಜನಗಳ ಸಮೂಹ. ಹೀಗಾಗಿ ಮನಸೇ ಮಂದಿರ ಎನ್ನುವ ರೀತಿಯಲ್ಲಿ ಮನಸ್ಸಿನ ಮೂಲಕ ರಾಷ್ಟ್ರ ನಿರ್ಮಾಣದ ಕಾಯಕವೇ ಈ ಮತದಾನದಲ್ಲಿ ಪಾಲ್ಗೊಳ್ಳುವುದು ನಮ್ಮೆಲ್ಲರ ಶ್ರದ್ಧಾವಂತ ಕರ್ತವ್ಯ.